ಮಗನ ನಾಪತ್ತೆ ಪ್ರಕರಣದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ 72 ವರ್ಷದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ₹2 ಲಕ್ಷ ದಂಡ ವಿಧಿಸಿದೆ. ಪೊಲೀಸರ ತನಿಖೆಗೆ ತೊಂದರೆ ನೀಡುವ ಉದ್ದೇಶದಿಂದ ದುರುದ್ದೇಶಪೂರಿತವಾಗಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಸೆ.8): ಕರ್ನಾಟಕ ಹೈಕೋರ್ಟ್ 72 ವರ್ಷದ ಮಹಿಳೆಯೊಬ್ಬರಿಗೆ ₹2 ಲಕ್ಷ ದಂಡ ವಿಧಿಸಿದೆ. ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನಗೊಂಡಿದ್ದ ಮಹಿಳೆ, ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದ 'ಹೇಬಿಯಸ್ ಕಾರ್ಪಸ್' (Habeas Corpus) ಅರ್ಜಿ ಸಲ್ಲಿಸಿದ್ದಕ್ಕಾಗಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಮಹೇಶ್ವರಿ ಎಂ. ಎಂಬ ಮಹಿಳೆ ತಮ್ಮ ಮಗ ಕ್ರಿಪ್ಲಾನಿ ಎಂ. 2025ರ ಜುಲೈ 7 ರಿಂದ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಮಗನೊಂದಿಗೆ ಸಂಪರ್ಕದಲ್ಲಿದ್ದ ತಾಯಿ

ಪೊಲೀಸರ ತನಿಖೆಯ ವೇಳೆ ಮಹಿಳೆ ತನ್ನ ಮಗನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನುವುದನ್ನು ಬಹಿರಂಗಪಡಿಸಿತ್ತು. ಈ ಅರ್ಜಿಯು ಪೊಲೀಸರಿಗೆ ತೊಂದರೆ ನೀಡುವ ಏಕೈಕ ಉದ್ದೇಶದಿಂದ ಸಲ್ಲಿಕೆಯಾಗಿದೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದರು. ಎಲ್ಲಾ ಸಾಕ್ಷಿಗಳನ್ನು ಪರಿಶೀಲನೆ ಮಾಡಿದ ಕೋರ್ಟ್‌, ಮಹಿಳೆ ದುರುದ್ದೇಶದಿಂದ ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ರಾಜೇಶ್ ರೈ ಕೆ. ಅವರ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿ, "ನ್ಯಾಯಾಂಗ ಪ್ರಕ್ರಿಯೆಯನ್ನು ರಕ್ಷಿಸಲು, ಇಂತಹ ಕ್ಷುಲ್ಲಕ ಮತ್ತು ದುರುದ್ದೇಶಪೂರಿತ ಅರ್ಜಿಗಳನ್ನು ನಿಯಂತ್ರಿಸುವುದು ಅವಶ್ಯಕ. ಆದ್ದರಿಂದ, ಸತ್ಯವನ್ನು ಮರೆಮಾಚಿ ಕೆಟ್ಟ ಉದ್ದೇಶದಿಂದ ನ್ಯಾಯಾಲಯವನ್ನು ಸಂಪರ್ಕಿಸಿದ ಅರ್ಜಿದಾರ ಮಹಿಳೆಗೆ ₹2 ಲಕ್ಷ ದಂಡ ವಿಧಿಸಲಾಗಿದೆ" ಎಂದು ತೀರ್ಪು ನೀಡಿತು.

ದಂಡ ಪಾವತಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಕೇಸ್‌

ದಂಡದ ಮೊತ್ತದಲ್ಲಿ ₹1 ಲಕ್ಷವನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (Karnataka Legal Services Authority) ಮತ್ತು ಉಳಿದ ₹1 ಲಕ್ಷವನ್ನು ಕರ್ನಾಟಕ ಪೊಲೀಸ್ Benevolent Fund ಗೆ ಪಾವತಿಸಬೇಕು ಎಂದು ಸೂಚಿಸಿದೆ.

ಎರಡು ವಾರಗಳಲ್ಲಿ ದಂಡ ಪಾವತಿಸಲು ವಿಫಲವಾದರೆ, ನ್ಯಾಯಾಲಯದ ನಿಂದನೆ (contempt) ಪ್ರಕರಣವನ್ನು ದಾಖಲಿಸಲಾಗುವುದು ಎಂದು ಸೂಚನೆ ನೀಡಲಾಗಿದೆ.