ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ, ಅಜ್ಜಿಗೆ ಕರೆ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್, 9 ವರ್ಷದ ವಿದ್ಯಾರ್ಥಿ ತರುಣ್‌ನನ್ನು ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ನಾಪತ್ತೆ
ಚಿತ್ರದುರ್ಗ (ಅ.21): ಅಜ್ಜಿಗೆ ಕರೆ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೋರ್ವ ಪುಟ್ಟ ವಿದ್ಯಾರ್ಥಿಗೆ ಒದ್ದು ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂಸ್ಕೃತ ವೇದ ವಸತಿ ಶಾಲೆ ವಿದ್ಯಾರ್ಥಿ ತರುಣ್(9) ಹಲ್ಲೆಗೊಳಗಾದ ವಿದ್ಯಾರ್ಥಿ. ವೀರೇಶ್ ಹಿರೇಮಠ್, ಹಲ್ಲೆ ಮಾಡಿದ ಮುಖ್ಯ ಶಿಕ್ಷಕ. ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಪತ್ತೆ ಆಗಿರುವ ಶಿಕ್ಷಕ ವಿರೇಶ್.
ಅಜ್ಜಿಗೆ ಕಾಲ್ ಮಾಡಿದ ಬಾಲಕನ ಮೇಲೆ ಕ್ರೌರ್ಯ!
ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ನಾಯಕನಹಟ್ಟಿ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಉತ್ತರ ಕರ್ನಾಟಕ ಮೂಲದ 9 ವರ್ಷದ ತರುಣ್ ಎಂಬ ವಿದ್ಯಾರ್ಥಿ ವಿದ್ಯಾಭ್ಯಾಸಕ್ಕೆ ಮಾಡುತ್ತಿದ್ದಾನೆ. ಆದರೆ ಇತ್ತೀಚೆಗೆ ತರುಣ್ ತನ್ನ ಅಜ್ಜಿಗೆ ಫೋನ್ ಮಾಡಿದ್ದನ್ನು ತಿಳಿದುಕೊಂಡ ಮುಖ್ಯ ಶಿಕ್ಷಕ ವಿರೇಶ್ ಹಿರೇಮಠ್ ಕೋಪಗೊಂಡು, ಅವನ ಮೇಲೆ ಕಾಲಿನ ಒಡ್ಡಿ ವಿಕೃತ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ 'ಬೇರೆ ನಂಬರಿನಿಂದ ಕರೆ ಮಾಡಿದರೆ ಸುಮ್ಮನೆ ಬಿಡಲ್ಲ' ಎಂದು ಬೆದರಿಸಿದ್ದಾನೆ. ಈ ವೇಳೆ ಪುಟ್ಟ ಬಾಲಕನನ್ನ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕ್ರೌರ್ಯದ ವಿಡಿಯೋ ವೈರಲ್:
ಬಾಲಕನ ಮೇಲೆ ಶಿಕ್ಷಕ ಅಮಾನವೀಯವಾಗಿ ವರ್ತಿಸಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಶಿಕ್ಷಕ ನಾಪತ್ತೆಯಾಗಿದ್ದಾನೆ. ಘಟನೆ ಬಗ್ಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ವಿರೇಶ್ ಹಿರೇಮಠ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಾಯಕನಹಟ್ಟಿ ಪೊಲೀಸರು. ಇದೀಗ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.
