ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಇ.ಡಿ ಅಧಿಕಾರಿಗಳು 50 ಕೋಟಿ ರೂ. ಮೌಲ್ಯದ 44 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಈ ಕೇಸಲ್ಲಿ ವಶಕ್ಕೆ ಪಡೆದ ಆಸ್ತಿ ಮೌಲ್ಯ ₹150 ಕೋಟಿ ದಾಟಿದೆ.
ಬೆಂಗಳೂರು (ಅ.09): ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತೊಂದು ಆಘಾತ ನೀಡಿದೆ. ಇ.ಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ 50 ಕೋಟಿ ರೂಪಾಯಿ ಮೌಲ್ಯದ 44 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಈ ದಾಳಿಯೊಂದಿಗೆ, ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರ ಸಹಚರರಿಗೆ ಸಂಬಂಧಿಸಿದಂತೆ ಈವರೆಗೆ ಇ.ಡಿ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯವು ₹150 ಕೋಟಿಗೂ ಅಧಿಕವಾಗಿದೆ. ಇ.ಡಿ ಮೂಲಗಳ ಪ್ರಕಾರ, ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಬ್ಯಾಂಕ್‌ನ ಎರಡು ಲಾಕರ್‌ಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯ ನಡೆಸಲಾಗಿದೆ. ಈ ಎರಡು ಲಾಕರ್‌ಗಳನ್ನು ತೆರೆದು ಪರಿಶೀಲಿಸಿದಾಗ, ಬರೋಬ್ಬರಿ 44 ಕೆ.ಜಿ ತೂಕದ ಚಿನ್ನಾಭರಣ ಪತ್ತೆಯಾಗಿದೆ. ಅಂದಾಜು ₹50 ಕೋಟಿ ಮೌಲ್ಯದ ಈ ಚಿನ್ನವನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ ತಿಂಗಳಲ್ಲಿ ಇ.ಡಿ ಅಧಿಕಾರಿಗಳು ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಈ ಪ್ರಕರಣದಲ್ಲಿ ಹೊಸ ಹೊಸ ಅಕ್ರಮಗಳು ಬೆಳಕಿಗೆ ಬರುತ್ತಿವೆ.
₹150 ಕೋಟಿಗೂ ಹೆಚ್ಚು ಸಂಪತ್ತು ವಶ:
ವೀರೇಂದ್ರ ಪಪ್ಪಿ ಅವರು 'King567', 'Raja567', 'Puppy's003' ನಂತಹ ಹಲವಾರು ಆನ್‌ಲೈನ್ ಬೆಟ್ಟಿಂಗ್ ತಾಣಗಳನ್ನು ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಇ.ಡಿ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಅವರ 30ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ದೊಡ್ಡ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ಈ ಹಿಂದಿನ ದಾಳಿಗಳಲ್ಲಿ ವಶಪಡಿಸಿಕೊಂಡ ಪ್ರಮುಖ ವಸ್ತುಗಳು:
- ಸುಮಾರು ₹12 ಕೋಟಿ ನಗದು (ಸುಮಾರು ₹1 ಕೋಟಿ ವಿದೇಶಿ ಕರೆನ್ಸಿ ಸೇರಿ).
- ಹಲವು ಕೋಟಿ ಮೌಲ್ಯದ ಚಿನ್ನದ ಆಭರಣ ಮತ್ತು 10 ಕೆ.ಜಿ ಬೆಳ್ಳಿ.
- ಬೆಂಗಳೂರು, ಗೋವಾ, ಚಳ್ಳಕೆರೆ ಸೇರಿದಂತೆ ಹಲವು ಕಡೆಗಳಲ್ಲಿರುವ ಆಸ್ತಿ ದಾಖಲೆಗಳು.
- ಬೆಂಗಳೂರು ಮತ್ತು ಚಳ್ಳಕೆರೆಯಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.
ಒಟ್ಟಾರೆಯಾಗಿ, ಈ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ವೀರೇಂದ್ರ ಪಪ್ಪಿಯವರ ಒಡೆತನದ ಸಂಸ್ಥೆಗಳು ಒಂದೇ ಗೇಟ್‌ವೇ ಮೂಲಕ ₹2,000 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿರುವ ಬಗ್ಗೆ ಇ.ಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಇ.ಡಿ ದಾಳಿ ಮುಂದುವರೆದಿದ್ದು, ಪ್ರಕರಣದ ತನಿಖೆ ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆಯಿದೆ.
