ಕೊಪ್ಪಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹಿಂದಿನ ಲೋಕಸಭಾ ಚುನಾವಣೆಯ ಸೋಲನ್ನು ನೆನಪಿಸಿಕೊಂಡರು. ಇದೇ ವೇಳೆ, ಜಾತಿ ಸಮೀಕ್ಷೆಯು ಸಮ ಸಮಾಜ ನಿರ್ಮಾಣಕ್ಕಾಗಿ ಎಂದು ಸ್ಪಷ್ಟಪಡಿಸಿ, ಗ್ಯಾರಂಟಿ ಯೋಜನೆಗಳು ನಿಲ್ಲುವ ವದಂತಿಯನ್ನು ತಳ್ಳಿಹಾಕಿದರು.
ಕೊಪ್ಪಳ (ಅ.06): ನಾನು ಲೋಕಸಭೆಗೆ ಹೋಗುವುದಿಲ್ಲವೆಂದು ಸಾರಾ ಸಗಟಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಿಂದ ಕೊಪ್ಪಳಕ್ಕೆ ಬಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ತಮ್ಮ ಸೋಲಿನ ಕಹಿ ಅನುಭವವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳದ ಜನತೆ ಮುಂದೆ ಮಾತನಾಡಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಒಂದು ಸಲ ಕೊಪ್ಪಳದಲ್ಲಿ ಲೋಕಸಭೆಗೆ ನಿಂತಿದ್ದೆ. ಆಗ ಸೋಲಿಸಿ ಬಿಟ್ಟರು. ಆದರೂ ಜನ ಕಡಿಮೆ ಅಂತರದಿಂದ ಸೋಲಿಸಿದ್ದರು ಎಂದು ನೆನಪಿಸಿಕೊಂಡರು. ಈ ಮೂಲಕ ಸೋಲಿನಲ್ಲೂ ಕೊಪ್ಪಳದ ಜನರ ಪ್ರೀತಿ ಮತ್ತು ಬೆಂಬಲವನ್ನು ಸ್ಮರಿಸಿ, ಜಿಲ್ಲೆಯ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ, ಚರ್ಚೆಯಲ್ಲಿರುವ ಬಲ್ಡೋಟಾ ಕಾರ್ಖಾನೆ ವಿಚಾರದ ಮತ್ತು ಜಮೀನು ಕಳೆದುಕೊಂಡಿರುವ ರೈತರ ವಿಷಯದ ಕುರಿತು ಪ್ರಸ್ತಾಪವಾದಾಗ, 'ಅದಿನ್ನೂ ಕೋರ್ಟ್‌ನಲ್ಲಿದೆ, ನೋಡೋಣ, ಎಂದು ಪ್ರತಿಕ್ರಿಯಿಸಿದರು.
ಜಾತಿ ಸಮೀಕ್ಷೆ: 'ಸಮ ಸಮಾಜ' ನಿರ್ಮಾಣದ ಗುರಿ
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕ ಸೋಮಣ್ಣ ಅವರು ನೀಡಿರುವ, 'ಮೇಲ್ಜಾತಿ ತುಳಿಯಲು ಸಮೀಕ್ಷೆ ಮಾಡುತ್ತಿದ್ದಾರೆ' ಎಂಬ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. 'ಅಂಕಿ-ಅಂಶ ಬೇಕೋ ಬೇಡ್ವೋ? ಯಾರನ್ನೂ ತುಳಿಯೋ ಪ್ರಶ್ನೆ ಇಲ್ಲ. ಸಮ ಸಮಾಜ ನಿರ್ಮಾಣ ಮಾಡಬೇಕು' ಎಂದು ಹೇಳಿದರು. ಈ ಸಮೀಕ್ಷೆಯ ಮೂಲ ಉದ್ದೇಶ ಸಮಾನತೆಯನ್ನು ಸಾಧಿಸುವುದೇ ಹೊರತು ಯಾವುದೇ ಜಾತಿಯ ವಿರುದ್ಧ ಇಲ್ಲ. ಸಮೀಕ್ಷೆಯ ಪ್ರಗತಿಯ ಕುರಿತು ಮಾತನಾಡಿದ ಅವರು, 'ಸಮೀಕ್ಷೆ ನಾಳೆ ಮುಗಿಯುತ್ತೆ ಅನ್ನೋ ವಿಶ್ವಾಸ ಇದೆ. ನಾಳೆ ಸಾಯಂಕಾಲದ ವರೆಗೂ ನೋಡೋಣ. ಇವತ್ತು ಎರಡು ದಿನಗಳಲ್ಲಿ ಮುಗಿಬಹುದು. ಕೊಪ್ಪಳ ಜಿಲ್ಲೆಯಲ್ಲಿ ಶೇ.97% ಸಮೀಕ್ಷೆ ಆಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಜಾತಿ ಗಣತಿಯನ್ನು ವಿರೋಧಿಸುತ್ತಿರುವ ಬಗ್ಗೆ ಪ್ರಶ್ನಿಸಿ, ಜೋಶಿ ಕೇಂದ್ರ ಮಂತ್ರಿ ಅವರು ಜಾತಿ ಗಣತಿ ವಿರೋಧ ಮಾಡ್ತಾರಾ? ಬದಲಾವಣೆ ಬೇಡ ಅಂದವರು ಸಮೀಕ್ಷೆ ವಿರೋಧ ಮಾಡ್ತಾರೆ ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಿಲುವನ್ನು ಟೀಕಿಸಿದರು.
ಗ್ಯಾರಂಟಿ ಯೋಜನೆಗಳು ಮತ್ತು ಇತರೆ ವಿಷಯಗಳು
ಇತ್ತೀಚೆಗೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಕೆಲ ತಿಂಗಳು ಬಂದ್ ಆಗಿವೆ ಎಂಬ ಸುದ್ದಿ ಹರಿದಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ತಕ್ಷಣವೇ ಸಿಟ್ಟಿಗೆದ್ದರು. ನಿಮಗೆ ಯಾರ ಹೇಳಿದರು?" ಎಂದು ಪ್ರಶ್ನಿಸಿ, ಗ್ಯಾರಂಟಿ ಯೋಜನೆಗಳು ನಿಂತಿಲ್ಲ ಎಂದು ಪರೋಕ್ಷವಾಗಿ ಮಾಧ್ಯಮದವರಿಗೆ ಗರಂ ಆದರು. ಇನ್ನು, ಕೆಮ್ಮಿನ ಔಷಧಿ ಕುರಿತು ಬಂದ ದೂರಿನ ಬಗ್ಗೆಯೂ ಪ್ರತಿಕ್ರಿಯಿಸಿ, 'ಕೆಮ್ಮಿನ ಔಷಧಿ ಕುರಿತು ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ. ಎಂದು ತಿಳಿಸಿದರು. ನವೆಂಬರ್ ಕ್ರಾಂತಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ತಂಗಡಗಿ ಅವರು, 'ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ' ಎಂದು ಲಘುವಾಗಿ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಒಟ್ಟಾರೆಯಾಗಿ, ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ, ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಯ ಕುರಿತ ತಮ್ಮ ಸರ್ಕಾರದ ನಿಲುವುಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
