MB Patil Demands Separate Lingayat Religion, Says Can't Blame Siddaramaiah This Time ಸಚಿವ ಎಂ.ಬಿ. ಪಾಟೀಲ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಮತ್ತೆ ಬಲವಾಗಿ ಮುಂದಿಟ್ಟಿದ್ದು, ಇದು ಬಸವ ಧರ್ಮ ಆಧಾರಿತ ಭಾರತೀಯ ಮೂಲದ ಧರ್ಮ ಎಂದು ಪ್ರತಿಪಾದಿಸಿದ್ದಾರೆ.
ಬೆಂಗಳೂರು (ಅ.6): ಜಾತಿ ಗಣತಿ ಮತ್ತು ಲಿಂಗಾಯತ ಧರ್ಮದ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ, ಸಚಿವ ಎಂ.ಬಿ. ಪಾಟೀಲ್ ಅವರು ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತಮ್ಮ ಆಗ್ರಹವನ್ನು ಬಲವಾಗಿ ಮಂಡಿಸಿದ್ದಾರೆ. ಹಿಂದಿನ ರಾಜಕೀಯ ಗೊಂದಲಗಳನ್ನು ತಪ್ಪಿಸಿ ಈ ವಿಷಯವನ್ನು ಸಕಾರಾತ್ಮಕವಾಗಿ ಮುನ್ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. "ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು. ಆದರೆ ಲಿಂಗಾಯತ ಧರ್ಮವು ಬಸವ ಧರ್ಮ, ಇದು ಇಂಡಿಕ್ ರಿಲಿಜಿಯನ್ (ಭಾರತೀಯ ಮೂಲದ ಧರ್ಮ) ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
"ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಇಲ್ಲವಲ್ಲ. ಹಾಗೆಯೇ ಲಿಂಗಾಯತ ಧರ್ಮದಿಂದಲೂ ಯಾರಿಗೂ ತೊಂದರೆಯಾಗುವುದಿಲ್ಲ. ಹಾಗಿದ್ದರೂ ಲಿಂಗಾಯತರ ಬೆನ್ನು ಬೀಳುವುದು ಏಕೆ?" ಎಂದು ಪ್ರಶ್ನಿಸಿದ್ದಾರೆ. "ನಾವು ಲಿಂಗಾಯತ ಧರ್ಮದವರು ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ" ಎಂದು ಹೇಳುವ ಮೂಲಕ ತಮ್ಮ ಧರ್ಮದ ವಿಶಿಷ್ಟತೆಯನ್ನು ತಿಳಿಸಿದ್ದಾರೆ.
ಕಳೆದ ಬಾರಿ ಈ ವಿಷಯವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿದರು (ಗೊಂದಲ ಸೃಷ್ಟಿಸಲಾಯಿತು). ಆದರೆ ಈ ಸಲ ಯಾರ ಆಟಗಳೂ ನಡೆಯುವುದಿಲ್ಲ. ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ನಾವು ಪಾಸಿಟಿವ್ ಆಗಿ ಹೋಗೋಣ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮವು ಮಠಾಧಿಪತಿಗಳ ಒಕ್ಕೂಟದಿಂದ ನಡೆದಿದೆ. ದ್ವಂದ್ವ ನಿಲುವು ಇರುವವರನ್ನು ಕರೆಸಿಲ್ಲ, ಬದಲಿಗೆ ನೇರ ನಿಲುವು ಇರುವವರನ್ನು ಮಾತ್ರ ಕರೆದಿದ್ದೇವೆ ಎಂದಿದ್ದಾರೆ.
ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ತಮ್ಮ ಹತ್ತಿರ ಬಂದಿದೆ. ದಾವಣಗೆರೆಯಲ್ಲಿ ನಡೆದ ನಿರ್ಣಯದಲ್ಲಿ ಅವರು "ನಾವು ಹಿಂದೂ ಧರ್ಮದ ಭಾಗವಲ್ಲ" ಎಂದು ತೀರ್ಮಾನಿಸಿದ್ದು, "ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ" ಎಂದು ಪಾಟೀಲ್ ತಿಳಿಸಿದ್ದಾರೆ. "ಕೇಂದ್ರ ಓಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸುವ ಮೂಲಕ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ಲಿಂಗಾಯತ ಧರ್ಮದ ಸಣ್ಣ ಸಣ್ಣ ಉಪ ಪಂಗಡಗಳನ್ನು ಒಟ್ಟಿಗೆ ಕೊಂಡೊಯ್ಯುವುದು ಮುಖ್ಯ. ಇವರೊಂದಿಗೆ ನಾವು ಸಂಬಂಧ ಬೆಳೆಸಿಲ್ಲ, ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಇವರೆಲ್ಲರಿಗೂ ರಾಜಕೀಯವಾಗಿ ಶಕ್ತಿ ತುಂಬಬೇಕು ಎಂದಿದ್ದಾರೆ. ತಾವು ಹಿಂದೂ ವಿರೋಧಿಗಳಲ್ಲ, ವೀರಶೈವ ವಿರೋಧಿಗಳೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ವೀರಶೈವ V/S ಲಿಂಗಾಯತ ಫೈಟ್
ಈ ನಡುವೆ ಕಾಂಗ್ರೆಸ್ ಸರ್ಕಾರದ ವೀರಶೈವ ಲಿಂಗಾಯತ ಸಚಿವರಲ್ಲೇ ಬಿರುಕು ಮೂಡಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನ ವಿಚಾರಕ್ಕೆ ಅಸಮಾಧಾನ ಭುಗಿಲೆದ್ದಿದೆ. ಮತ್ತೊಮ್ಮೆ ಸಚಿವ ಈಶ್ವರ್ ಖಂಡ್ರೆ v/s ಎಂ.ಬಿ ಪಾಟೀಲ್ ವೇದಿಕೆ ಸಿದ್ದವಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂದು ಎಂಬಿ ಪಾಟೀಲ್ ಹೇಳಿದ್ದರೆ, ವೀರಶೈವ ಲಿಂಗಾಯತ ಎರಡು ಒಂದೇ ಈಶ್ವರ್ ಖಂಡ್ರೆ ವಾದ ಮಂಡಿಸಿದ್ದಾರೆ. 2013-18 ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈ ವಿಚಾರ ಕಿಡಿ ಹೊತ್ತಿಸಿತ್ತು. ಇದೀಗ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ಎದ್ದಿದೆ.
ಹೀಗಾಗಿ ಖಂಡ್ರೆ, ಎಂಬಿ ಪಾಟೀಲ್ ನಡುವೆ ಭಿನ್ನಮತ ಸ್ಪೋಟವಾಗುವ ಲಕ್ಷಣ ಮೂಡಿದೆ. ಈ ಬೆಳವಣಿಗೆ ಮುಂದೆ ಯಾವ ತಿರುವು ಪಡೆಯಲಿದೆಯೋ ಎಂಬ ಕುತೂಹಲ ಇದೆ. ಇದೇ ವಿಚಾರವಾಗಿ ಚುನಾವಣೆಯಲ್ಲೂ ಸಿದ್ದರಾಮಯ್ಯ ಸರ್ಕಾರ ಹಿನ್ನಡೆ ಅನುಭವಿಸಿತ್ತು. ಇದೀಗ ಮತ್ತೊಮ್ಮೆ ಇಂಥದ್ದೇ ವಿಚಾರಕ್ಕೆ ಸಿಎಂ ಕೈ ಹಾಕಿದ್ದಾರೆ.
