Chetan ahimsa: ಹೊನ್ನಾವರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಟ ಚೇತನ್ ಅಹಿಂಸಾ, ಕುವೆಂಪು ಅಂಬೇಡ್ಕರ್‌ರವರ ಚಿಂತನೆಗಳ ಆಧಾರದ ಮೇಲೆ ಸಮಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕೆಂದು ಕರೆ ನೀಡಿದರು. ಭ್ರಷ್ಟಾಚಾರ ಮುಕ್ತ ಆಡಳಿತ ತರಲು ಕರ್ನಾಟಕದಿಂದಲೇ ಹೋರಾಟ ಆರಂಭಿಸೋಣ ಎಂದರು.

ಹೊನ್ನಾವರ (ಸೆ.26): ರಾಷ್ಟ್ರಕವಿ ಕುವೆಂಪುರವರ ಸರ್ವರಿಗೂ ಸಮಬಾಳು, ಸಮಪಾಲು ಪರಿಕಲ್ಪನೆಯ ಸಮಾನತೆ ಮತ್ತು ನ್ಯಾಯದೊಂದಿಗೆ ಸಮಸಮಾಜದ ನಿರ್ಮಾಣಕ್ಕೆ ಯುವ ಜನತೆ ಪಣತೊಡಬೇಕೆಂದು ಚಿತ್ರ ನಟ ಚೇತನ್ ಅಹಿಂಸಾ ಕರೆ ನೀಡಿದ್ದಾರೆ.

ಅಳ್ಳಂಕಿಯ ಅಂಬೇಡ್ಕರ್‌ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ನಟ ಚೇತನ್, ದೇಶದಲ್ಲಿ ಭೀಮರಾವ್ ಅಂಬೇಡ್ಕರ್‌ ಚಿಂತನೆಯ ಸಮಸಮಾಜದ ನಿರ್ಮಾಣ ಆಗಬೇಕೆನ್ನುವ ದಿಶೆಯಲ್ಲಿ ನಾನು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ ದೇಶದ ರಾಜಕೀಯ ಕಲುಷಿತಗೊಂಡಿದೆ. ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಕೊಡಲಿ ಏಟು ನೀಡುವ ಕೆಲಸ ಆಗುತ್ತಿದೆ. ನಾಗರಿಕರ ಮತ ಖರೀದಿಗೆ ಅಭ್ಯರ್ಥಿಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಹಣ, ಪ್ರಭಾವ ಇರುವವರು ಮಾತ್ರ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವಂತಾಗಿದೆ. ಜನಸಾಮಾನ್ಯರು ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Davanagere: ನಾನು ಸಿಎಂ ಆದ್ರೆ ಪೊಲೀಸರ ಕೈಗೆ ಎಕೆ 47 ನೀಡ್ತೇನೆ: ಯತ್ನಾಳ್

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪದ್ಧತೆ ನಿಲ್ಲಬೇಕು:

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪದ್ಧತಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವಿನಾಶಕಾರಿ ಲಾಭಿಗೆ ಸರ್ಕಾರಗಳು ಮಣಿಯುತ್ತಿದ್ದು. ಬಂಡವಾಳ ಶಾಹಿಗಳೇ ಪರೋಕ್ಷವಾಗಿ ಸರ್ಕಾರ ನಡೆಸುತ್ತಿವೆ. ಹೀಗೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ನಡೆಗಳು ಮತ್ತು ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಬೇಡ್ಕರ್‌ ಚಿಂತನೆಯ ಸಮಾನತೆ ಮತ್ತು ನ್ಯಾಯದೊಂದಿಗೆ ಸಮಸಮಾಜದ ನಿರ್ಮಾಣಕ್ಕೆ ನಾವು ನೀವೆಲ್ಲರೂ ಸಿದ್ಧರಾಗಬೇಕು ಎಂದರು.

2028 ರ ಚುನಾವಣೆಗೆ ಜನಜಾಗೃತಿ:

ಈ ದಿಶೆಯಲ್ಲಿ 2028ರ ವಿಧಾನಸಭಾ ಚುನಾವಣೆಯ ಒಂದು ವರ್ಷದ ಮೊದಲೇ ನಾವು ಕೆಲಸ ಮಾಡಬೇಕು. ಜನಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ಕಾರ್ಯವನ್ನು ನಾವು ಕರ್ನಾಟಕದಿಂದಲೇ ಮೊದಲು ಆರಂಭಿಸೋಣ. ನಮ್ಮರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ತರಬೇಕು. ಅರಣ್ಯ ವಿಸ್ತರಣೆ, ಮಾಲಿನ್ಯ ನಿವಾರಣೆ, ವಿನಾಶಕಾರಿ ಲಾಬಿಗಳ ನಿಯಂತ್ರಣ, ಹೆಚ್ಚಿನ ಪರಿಸರ ಸ್ನೇಹಿ ಕಾರ್ಯಕ್ರಮಗಳು, ನೀರು, ಜಲಮೂಲಗಳ ರಕ್ಷಣೆ, ಭಾಷಾ ಹಕ್ಕುಗಳು, ಸಾಂಸ್ಕೃತಿಕ ವಿಚಾರಗಳು, ಭಾಷಾ ಸಮಾನತೆಯ ಪರವಾದ ನೀತಿಗಳು, ಜಾನಪದ ಸಂಸ್ಕೃತಿಗಳ ಸೇರ್ಪಡೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಮತ್ತು ಸಮಾನ ನ್ಯಾಯ ಸಹಿತ ಪರಿಸರಕ್ಕೆ ಪೂರಕವಾದ ಅಭಿವ್ರದ್ಧಿ ಕಾರ್ಯಕ್ರಮಗಳು, ಸಂಪತ್ತಿನ ಅಸಮಾನತೆ ತೊಡೆದು ಹಾಕುವುದು ನಮ್ಮ ಮುಂದಿನ ಗುರಿಯಾಗಬೇಕು ಎಂದು ನುಡಿದರು.

ಇದನ್ನೂ ಓದಿ: Hindi imposition: ಹಿಂದಿ ಹೇರಿಕೆ ಕಾರ್ಯಕ್ರಮ ಆರೋಪ: ಹೋಟೆಲ್ ತಾಜ್ ವೆಸ್ಟೆಂಡ್‌ಗೆ ನುಗ್ಗಿದ ಕರವೇ ಕಾರ್ಯಕರ್ತರ ಬಂಧನ

ರಾಷ್ಟ್ರೀಯ ಮೀನುಗಾರರ ಸಂಘಟನೆಯ ಚಂದ್ರಕಾಂತ ಕೊಚರೇಕರ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ಜಿ.ಟಿ. ಹಳ್ಳೇರ ಸ್ವಾಗತಿಸಿದರು. ಗ್ರಾಪಂ ಸದಸ್ಯ ಗಣೇಶ ಹಳ್ಳೇರ ವಂದಿಸಿದರು. ಗ್ಯಾರಂಟಿ ಸಮಿತಿ ಸದಸ್ಯ ಮಾಧವ ಎಂ.ಗೌಡ, ಗ್ರಾಪಂ ಸದಸ್ಯೆ ಮಂಗಲಾ ಹಳ್ಳೇರ, ಪ್ರಭು ಸಂಶಿ ಮತ್ತಿತರ ಪ್ರಮುಖರಿದ್ದರು.