ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಸಭೆಯನ್ನು ಕರವೇ ಕಾರ್ಯಕರ್ತರು ಭಗ್ನಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದ್ದು, దీనికి ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರವೇ ಎಚ್ಚರಿಸಿದೆ.

ಬೆಂಗಳೂರ (ಸೆ.26): ಬೆಂಗಳೂರಿನ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮವನ್ನು ಕರವೇ ಕಾರ್ಯಕರ್ತರು ಭಗ್ನಗೊಳಿಸಿದ್ದಾರೆ. ಕೇಂದ್ರ ಸರ್ಕಾರದ 17 ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಬಳಕೆಯನ್ನು ಒತ್ತಾಯಪೂರ್ವಕವಾಗಿ ಬೆಳೆಸುವ ಕುರಿತು ಚರ್ಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಹಿಂದಿ ಬಳಕೆಗೆ ಚಿನ್ನದ ಪದಕ ಆಮಿಷ?

ಹಿಂದಿ ಬಳಕೆಗೆ ಚಿನ್ನದ ಪದಕ ಮತ್ತು ಪದೋನ್ನತಿಯ ಆಮಿಷವನ್ನೂ ಒಡ್ಡಲಾಗುತ್ತಿದೆ ಎಂದು ಕರವೇ ಗಂಭೀರ ಆರೋಪ ಮಾಡಿದೆ ಅಲ್ಲದೇ ಈ ಬಗ್ಗೆ ಕರ್ನಾಟಕ ಪೊಲೀಸ್ ಮತ್ತು ಗುಪ್ತಚರ ಇಲಾಖೆಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ಮಾಹಿತಿ ಕರವೇ ಮಾಹಿತಿಯಿದೆ. ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಕನ್ನಡಿಗರಿಂದಲೇ ಈ ಮಾಹಿತಿ ಬಂದಿದೆ ಎಂದು ನಾರಾಯಣಗೌಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಾಷಾ ಸಂಘರ್ಷ ಬೇಕಿಲ್ಲ, ಮಾತೃಭಾಷೆ ಉಳಿಸಿ : ಶಾ

ಕರವೇ ಕಾರ್ಯಕರ್ತರ ಬಂಧನ:

ಕರವೇ ಕಾರ್ಯಕರ್ತರು ಹಿಂದಿ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹರಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹೈಗ್ರೌಂಡ್ಸ್ ಪೊಲೀಸರು ಕರವೇ ಕಾರ್ಯಕರ್ತರನ್ನೇ ಬಂಧಿಸಿದ್ದಾರೆ. ಬಂಧಿತರ ಪೈಕಿ 13 ಮಹಿಳೆಯರು ಸೇರಿದಂತೆ, 3 ವರ್ಷದ ಮಗುವಿರುವ ಒಬ್ಬ ಮಹಿಳೆಯನ್ನೂ ಬಂಧಿಸಲಾಗಿದೆ. ಕರವೇ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿರುವ ಪೊಲೀಸರು ಇದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಲಾಗಿದೆ ಎಂದು ನಾರಾಯಣಗೌಡ ಆರೋಪಿಸಿದ್ದಾರೆ.

ನಾರಾಯಣಗೌಡರಿಂದ ಸಿಎಂಗೆ ಟಾಂಗ್:

ಸಿಎಂ ಸಿದ್ದರಾಮಯ್ಯ ಸದನದಲ್ಲಿ ವ್ಯಾಕರಣ ಪಾಠ ಮಾಡುತ್ತಾರೆ. ಆದರೆ ನಾಡು-ನುಡಿಯ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಏನೂ ಮಾಡಲಾಗುತ್ತಿಲ್ಲ. ನಮ್ಮ ಕರವೇ ಕಾರ್ಯಕರ್ತರು ಕನ್ನಡಪರ ಹೋರಾಟ ನಡೆಸಿದರೆ ಅವರನ್ನ ಬಂಧಿಸುವ ಕೆಲಸ ಮಾಡುತ್ತಾರೆಂದರೆ ನಿಮ್ಮ ಸಚಿವರಿಗೆ ಕನಿಷ್ಠ ಜ್ಞಾನವಿಲ್ಲ. ಇದರಿಂದ ಏನು ಪ್ರಯೋಜನ?? ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಇದನ್ನೂ ಓದಿ: Aiyyo Shraddha Shows: ಕನ್ನಡಿಗರನ್ನು ಕೆಣಕಿದ ಮಂಗಳೂರಿನ ಅಯ್ಯೋ ಶ್ರದ್ಧಾರ ಅದೊಂದು ಮಾತು! ಏನದು?

ನಾಳೆಯಿಂದ 31 ಜಿಲ್ಲೆಗಳಲ್ಲಿ ಕರವೇ ಹೋರಾಟ:

ನಾಳೆಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಕೂಡಲೇ ಕಾರ್ಯಕರ್ತರ ವಿರುದ್ಧದ ಕೇಸ್‌ಗಳನ್ನು ವಾಪಸ್ ಪಡೆಯಬೇಕು, ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು. ಕರವೇ ಕಾರ್ಯಕರ್ತರ ವಿರುದ್ಧ ರೌಡಿಶೀಟ್ ತೆರೆಯುವ ಮಾತಾಡುವಿರಾ? 78 ಲಕ್ಷ ಕಾರ್ಯಕರ್ತರು ದಂಗೆ ಎದ್ದರೆ ಏನು ಮಾಡುವಿರಿ? ನಿಮ್ಮ ಜೈಲುಗಳಲ್ಲಿ ಕೇವಲ 35 ಸಾವಿರ ಜನರಿಗೆ ಸ್ಥಳವಿದೆ. ಒಂದು ಲಕ್ಷ ಕಾರ್ಯಕರ್ತರು ಬೀದಿಗಿಳಿದರೆ ಏನಾಗುತ್ತದೆ ಯೋಚಿಸಿ! ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಿಂದಿಯ ಬಲವಂತದ ಹೇರಿಕೆಯನ್ನು ಸಹಿಸುವುದಿಲ್ಲ!"

ಮುಂದಿನ ತಿಂಗಳ 18ರಂದು ಹಿಂದಿ ವಿರೋಧಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗುವುದು. ನವೆಂಬರ್‌ನಲ್ಲಿ 17 ರಾಜ್ಯಗಳ ಚಿಂತಕರು ಮತ್ತು ಹೋರಾಟಗಾರರು ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಹಿಂದಿಯ ಬಲವಂತದ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ನಾರಾಯಣಗೌಡ ವಾರ್ನ್ ಮಾಡಿದರು.

ಕೇಂದ್ರ ರಾಜ್ಯದಲ್ಲಿ ಹಿಂದಿ ಹೇರುವ ಕನಸು ಕಾಣುತ್ತಿದೆ:

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ಕೆಟ್ಟ ಕನಸು ಕಾಣುತ್ತಿದೆ ಎಂದು ಆರೋಪಿಸಿರುವ ಕರವೇ, ನಾವು ಕನ್ನಡ ನಾಡು ನುಡಿಗಾಗಿ ಹೋರಾಡಿದರೆ ನಮ್ಮ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಕೇಸ್ ದಾಖಲಿಸಲಾಗುತ್ತಿದೆ. ನಾವೇ ಒಂದು ಲಿಸ್ಟ್ ಕೊಡ್ತೇವೆ ಮೊದಲು ರಾಜಕಾರಣಿಗಳ ವಿರುದ್ಧ ರೌಡಿಶೀಟ್ ತೆರೆಯಿರಿ ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರದ ಭಾಷಾ ನೀತಿಯ ವಿರುದ್ಧ ಕರವೇ ತೀವ್ರ ಹೋರಾಟಕ್ಕೆ ಸಿದ್ಧವಾಗಿದ್ದು, ಕರ್ನಾಟಕದ ನಾಡು-ನುಡಿಯ ರಕ್ಷಣೆಗೆ ದೊಡ್ಡ ಮಟ್ಟದ ಆಂದೋಲನಕ್ಕೆ ಕರೆ ನೀಡಿದೆ. ಭಾರತದ ಒಕ್ಕೂಟದ ಭವಿಷ್ಯ ಏನಾಗಲಿದೆ? ಎಂದು ನಾರಾಯಣಗೌಡ ಪ್ರಶ್ನಿಸಿದ್ದಾರೆ.