ಈ ತಿಂಗಳ ಪಡಿತರ ಆಹಾರ ಧಾನ್ಯ ಸಿಕ್ಕಿಲ್ಲವೇ? ಮನೆಗೆ ರೇಷನ್‌ ಕಾರ್ಡ್‌ ರದ್ದಾಗಿರುವ ಬಗ್ಗೆ ನೋಟಿಸ್‌ ಬಂದಿದೆಯೇ? ಕೂಡಲೇ ಆಹಾರ ಇಲಾಖೆ ಅಥವಾ ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಟ್ಟು ಕಾರಣವೇನು ಎಂಬುದನ್ನು ಪರೀಕ್ಷಿಸಿಕೊಳ್ಳಿ! ಅನರ್ಹ ಪಡಿತರ ಚೀಟಿ ರದ್ದತಿ ಆರಂಭಿಸಿದ ಸರ್ಕಾರ.

ಸಂಪತ್‌ ತರೀಕೆರೆ

ಬೆಂಗಳೂರು (ಸೆ.17): ಈ ತಿಂಗಳ ಪಡಿತರ ಆಹಾರ ಧಾನ್ಯ ಸಿಕ್ಕಿಲ್ಲವೇ? ಮನೆಗೆ ರೇಷನ್‌ ಕಾರ್ಡ್‌ ರದ್ದಾಗಿರುವ ಬಗ್ಗೆ ನೋಟಿಸ್‌ ಬಂದಿದೆಯೇ? ಕೂಡಲೇ ಆಹಾರ ಇಲಾಖೆ ಅಥವಾ ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಟ್ಟು ಕಾರಣವೇನು ಎಂಬುದನ್ನು ಪರೀಕ್ಷಿಸಿಕೊಳ್ಳಿ! ಏಕೆಂದರೆ, ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದ್ದು, ಕಾರ್ಡ್‌ ರದ್ದಾದವರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಿದೆ. ಇನ್ನು ಕೆಲವರಿಗೆ ನೋಟಿಸ್‌ ನೀಡಿದ್ದು, ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ಗಳನ್ನು ಪಡೆಯಲು ಅರ್ಹತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಅಥವಾ ಬಿಪಿಎಲ್‌ ಕಾರ್ಡ್‌ ಪಡೆದಿದ್ದರೆ ಅಂಥವರ ಮಾಹಿತಿ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಆರ್‌ಟಿಓ ಕಚೇರಿಗಳು, ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ.

ಅರ್ಹತೆ ಇಲ್ಲದಿದ್ದರೂ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಪಡೆದಿರುವವರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಲಾಗುತ್ತಿದೆ. ಇನ್ನು ಕೆಲವರ ಮನೆಗಳಿಗೆ ನೋಟಿಸ್‌ಗಳನ್ನು ಆಹಾರ ಇಲಾಖೆ ನೀಡಿದ್ದು, ದಾಖಲೆ ಸಮೇತ ಸ್ಪಷ್ಟನೆ ನೀಡಲು ಅವಕಾಶವೊಂದನ್ನು ನೀಡಿದೆ. ಒಂದು ವೇಳೆ ಸಮರ್ಪಕ ದಾಖಲೆ ಇಲ್ಲದಿದ್ದರೆ ಅಂತಹ ವ್ಯಕ್ತಿಗಳು ಪಡೆದಿರುವ ಅನ್ನಭಾಗ್ಯ ಯೋಜನೆಯ ಕಾರ್ಡ್‌ಗಳು ರದ್ದಾಗಲಿವೆ.

ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಇರುವ ಕುಟುಂಬ, ನಗರ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆ ಕೊಟ್ಟಿರುವವರು, ಸ್ವಂತಕ್ಕೆಂದು ನಾಲ್ಕು ಚಕ್ರದ ವಾಹನ ಹೊಂದಿರುವವರು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಸೇರಿ ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ ಪಡೆಯಲು ಅನರ್ಹರಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದಲೂ ಆಹಾರ ಇಲಾಖೆ ಅನರ್ಹರಿದ್ದರೂ ಕಾರ್ಡ್‌ ಪಡೆದಿರುವವರು ಇಲಾಖೆಗೆ ಕಾರ್ಡ್‌ಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಿತ್ತು.

3.65 ಲಕ್ಷ ಕಾರ್ಡ್‌ಗಳು ರದ್ದು: ಕಾರ್ಡ್‌ ಹಿಂದಿರುಗಿಸದೇ ಇರುವವರಿಂದ ದಂಡ ವಸೂಲಿ ಮಾಡುವ ಎಚ್ಚರಿಕೆ ಕೂಡ ಕೊಟ್ಟಿತ್ತು. ಆದರೂ, ಕಾರ್ಡ್‌ ಇಟ್ಟುಕೊಂಡಿರುವ ಅನರ್ಹರ ಮಾಹಿತಿಯನ್ನು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿ ನಡೆಸಿರುವ ಇತರ ವಹಿವಾಟುಗಳಿಂದ ಡೇಟಾ ಪಡೆದು ಈಗ ಎಲ್ಲರಿಗೂ ನೋಟಿಸ್‌ ಕೊಡಲಾಗುತ್ತಿದೆ. ಅಲ್ಲದೆ, ಪಡಿತರ ಆಹಾರ ಧಾನ್ಯ ನೀಡುವುದನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು ಮಾಡಿದ್ದು ಎಪಿಎಲ್‌ ಆಗಿ ಬದಲಾವಣೆ ಮಾಡಲಾಗಿದೆ.

12.68 ಲಕ್ಷ ಅನರ್ಹ ಪಡಿತರ ಕಾರ್ಡ್‌?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ 99.79 ಲಕ್ಷ ಪಿಎಚ್‌ಎಚ್‌ (ಆದ್ಯತಾ ಪಡಿತರ ಚೀಟಿಗಳು) ಇವೆ. ರಾಜ್ಯದ ಕೋಟ 17.65 ಲಕ್ಷ ಇದ್ದು, ಇವೆರಡು ಸೇರಿ 1,17,45,208 ಬಿಪಿಎಲ್‌ ಕಾರ್ಡುಗಳು ರಾಜ್ಯದಲ್ಲಿವೆ. ಈ ಪೈಕಿ ಈವರೆಗೆ ಶಂಕಾಸ್ಪದವೆಂದು 12,68,097 ಪಡಿತರ ಚೀಟಿಗಳನ್ನು ಆಹಾರ ಇಲಾಖೆ ಪತ್ತೆ ಮಾಡಿತ್ತು. ಈ ಪಡಿತರ ಚೀಟಿಗಳಲ್ಲಿ ಬರೋಬ್ಬರಿ 15.59 ಲಕ್ಷ ಮಂದಿ ಫಲಾನುಭವಿಗಳಿದ್ದರು ಎಂದು ಗುರುತಿಸಲಾಗಿದ್ದು ಹೊರ ರಾಜ್ಯದವರು, ಆರ್ಥಿಕವಾಗಿ ಸ್ಥಿತಿವಂತರೂ ಇದರಲ್ಲಿ ಸೇರಿದ್ದು ಕಾರ್ಡ್‌ಗಳನ್ನು ರದ್ದುಪಡಿಸಬೇಕೇ ಎಂಬುದರ ಬಗ್ಗೆ ಈಗಾಗಲೇ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪಡಿತರ ಹಂಚಿಕೆ ರದ್ದು: ಅನರ್ಹ ಮತ್ತು ರದ್ದಾದ ಫಲಾನುಭವಿಗಳ ಮಾಹಿತಿ ಒಳಗೊಂಡ ನೋಟಿಸ್‌ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಲು ಸೂಚಿಸಲಾಗಿದೆ. ಅಂತೆಯೇ ಪಟ್ಟಿ ಪ್ರಕಟಿಸಿದ್ದೇವೆ. ಜತೆಗೆ ನೋಟಿಸ್‌ ನೀಡಿರುವವರಿಗೆ ಪಡಿತರ ಆಹಾರ ಧಾನ್ಯದ ವಿತರಣೆಯನ್ನು ಕೂಡ ನಿಲ್ಲಿಸಲಾಗಿದೆ ಎಂದು ಕೆಲ ಪಡಿತರ ವಿತರಕರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸಲ್ಲಿಸಬೇಕಾದ ದಾಖಲೆ: ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿಯ ಮಾನದಂಡಗಳಿಗೆ ಒಳಪಡುವ ಮಾಹಿತಿಯನ್ನೊಳಗೊಂಡ ದಾಖಲೆಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಆಹಾರ ಇಲಾಖೆಗೆ ಸಲ್ಲಿಸಿ ಅರ್ಹತೆ ಇರುವ ನಿಯಮಾವಳಿಗ ರದ್ದಾದ ಕಾರ್ಡ್‌ಗಳನ್ನು ಮತ್ತೆ ಪಡೆಯಬಹುದು.

ಏನೇನು ದಾಖಲೆ
- ಪಡಿತರ ಚೀಟಿಯ ಎಲ್ಲಾ ಸದಸ್ಯರ ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ.
- ಪಟ್ಟಿಯಲ್ಲಿರುವ ಪಡಿತರ ಚೀಟಿದಾರರ ಪ್ಯಾನ್‌ಕಾರ್ಡ್‌ ಜೆರಾಕ್ಸ್‌ಪ್ರತಿ.
- ಚೀಟಿಯಲ್ಲಿರುವ ಸದಸ್ಯರ ಆದಾಯ ಪ್ರಮಾಣ ಪತ್ರ(ಲಭ್ಯವಿದ್ದರೆ ಸದಸ್ಯರೆಲ್ಲರದ್ದು) ಜೆರಾಕ್ಸ್‌ ಪ್ರತಿ.- ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಬಾಡಿಗೆ ಮನೆ ಕರಾರು ಪತ್ರದ ಜೆರಾಕ್ಸ್‌ ಪ್ರತಿ.
- ಸ್ವಂತ ಮನೆಯಲ್ಲಿ ವಾಸವಿದ್ದರೆ ಸ್ವಂತ ಮನೆಯ ಪತ್ರದ ಜೆರಾಕ್ಸ್‌ ಪ್ರತಿ
- ಪಡಿತರ ಚೀಟಿದಾರರ ನೌಕರಿಯ ಬಗ್ಗೆ ಮಾಹಿತಿ.
- ಪಡಿತರ ಚೀಟಿದಾರರ ಎರಡು ಮೊಬೈಲ್‌ ಸಂಖ್ಯೆ.
- ವಿದ್ಯುತ್‌ ಬಿಲ್‌.