ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಧಾನ ಪರಿಷತ್ (ಆ.19): ಅಧಿವೇಶನ ಮುಗಿದ ನಂತರ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು, ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಬಿಜೆಪಿಯ ಪ್ರತಾಪಸಿಂಹ ನಾಯಕ್ ಹಾಗೂ ಕಾಂಗ್ರೆಸ್ಸಿನ ಡಾ। ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ 15 ಲಕ್ಷ ಅನರ್ಹ ಪಡಿತರ ಚೀಟಿ ರದ್ದು ಮಾಡಲು ಮುಂದಾದಾಗ ಗೊಂದಲ ಉಂಟಾಗಿದ್ದರಿಂದ ಪಡಿತರ ಚೀಟಿ ರದ್ದು ಪ್ರಕ್ರಿಯೆ ನಿಲ್ಲಿಸಬೇಕಾಯಿತು ಎಂದರು.
ಆದರೆ ಈಗ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಅನರ್ಹ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದರು. ಎಪಿಎಲ್ ಕಾರ್ಡ್ ನೀಡಿಕೆ ಸಹ ನಿಲ್ಲಿಸಲಾಗಿದೆ. ಸುಮಾರು ಒಂದು ಲಕ್ಷ ಪಡಿತರ ಚೀಟಿದಾರರು ಪಡಿತರ ತೆಗೆದುಕೊಳ್ಳದ ಕಾರಣ ರದ್ದು ಮಾಡಲಾಗಿದೆ. ಆದರೆ ಬೇರೆ ಬೇರೆ ಕಾರಣಕ್ಕೆ ಪಡಿತರ ಚೀಟಿ ಅವಶ್ಯವಿದ್ದರೆ ಪರಿಶೀಲಿಸಿ ಎಪಿಎಲ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದರು. ತುರ್ತು ವೈದ್ಯಕೀಯ ಪರಿಸ್ಥಿತಿ ಹಿನ್ನೆಲೆ ಇರುವ ಅರ್ಹರಿಗೆ ಇ-ಶ್ರಮ ನೋಂದಾಯಿತ ಕಾರ್ಮಿಕರಿಗೆ ಪಿವಿಟಿಜಿ ಅಡಿ ಬರುವ ಬುಡಕಟ್ಟು ಸಮುದಾಯದವರಿಗೆ ಪಡಿತರ ಚೀಟಿಯನ್ನು ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಶಂಕಾಸ್ಪದ ಬಿಪಿಎಲ್ ಚೀಟಿ ರಾಜ್ಯದಲ್ಲಿ ಪತ್ತೆ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ ಸುಮಾರು 12.69 ಲಕ್ಷ ಪಡಿತರ ಚೀಟಿಗಳು ಶಂಕಾಸ್ಪದವಾಗಿದ್ದು, ಈ ಪಡಿತರ ಚೀಟಿ ಹಾಗೂ ಫಲಾನುಭವಿಗಳನ್ನು ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಆಹಾರ ನಿರೀಕ್ಷಕರ ಹಂತದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ಸಿನ ಎಂ. ನಾಗರಾಜು (ಯಾದವ) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಶೇ. 80ರಷ್ಟು ಬಿಪಿಎಲ್ ಕುಟುಂಬಗಳಿವೆ.
ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳ ಸಂಖ್ಯೆ ಶೇ. 50ರೊಳಗೆ ಇದೆ. ಹೀಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಗುರುತಿಸಿ ಕಾರ್ಡ್ ರದ್ದು ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಯಿತು. ಇದರಿಂದ ಅರ್ಹರಿಗೆ ಪಡಿತರ ಪಡೆಯಲು ಆಗುವುದಿಲ್ಲ. ಬಿಪಿಎಲ್ ಕಾರ್ಡ್ ಪಡೆಯಲು ಕೇಂದ್ರ ಸರ್ಕಾರಕ್ಕಿಂತ ರಾಜ್ಯದ ಮಾನದಂಡಗಳು ಹೆಚ್ಚಿವೆ. ಹೀಗಾಗಿ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದರು. ಇಲಾಖೆಯ ತಂತ್ರಾಂಶದಲ್ಲಿ ಕಂಡು ಬಂದ ದೋಷವನ್ನು ಪರಿಹರಿಸಲಾಗಿದ್ದು, ಪಡಿತರ ಚೀಟಿದಾರರಿಗೆ ಯಾವುದೇ ಸಮಸ್ಯೆ ಇಲ್ಲದೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ತಿಳಿಸಿದರು.
