ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಪ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧರಿಸಿದೆ. ಕೆಲವು ಸಂಘಟನೆಗಳು ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಬೇಡ ಎಂದು ವಿರೋಧಿಸಿ, ರಾಜ್ಯಪಾಲರಿಗೆ ದೂರು ನೀಡಲಿವೆ. ಗೋಮಾಂಸ ಸೇವನೆ, ಧಾರ್ಮಿಕ ಆಚರಣೆಗಳ ಬಗ್ಗೆ ಭಾನು ಅವರಿಗೆ ತಿಳಿವಳಿಕೆ ಇಲ್ಲ ಎಂದಿದ್ದಾರೆ.
ಬೆಂಗಳೂರು/ಮೈಸೂರು (ಆ.23): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಭಾನು ಮುಸ್ತಾಪ್ ಅವರಿಂದ ಉದ್ಘಾಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಈ ನಿರ್ಧಾರಕ್ಕೆ ರಾಜ್ಯದ ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಸ್ಲಿಂ ಸಮುದಾಯದ ಮಹಿಳೆಯ ಕೈಯಲ್ಲಿ ದಸರಾ ಉದ್ಘಾಟನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿವೆ.
ರಾಜ್ಯಪಾಲರಿಗೆ ದೂರು:
ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನಾಯ್ಕ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರಿಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್ ನಾಯ್ಕ್, 'ಭಾನು ಮುಸ್ತಾಪ್ ಅವರನ್ನ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೂಡಲೇ ಕೈಬಿಡಬೇಕು' ಎಂದು ಆಗ್ರಹಿಸಿದರು.
ಗೋಮಾಂಸ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಹೇಳಿಕೆ:
ಶಿವಕುಮಾರ್ ನಾಯ್ಕ್ ತಮ್ಮ ವಿರೋಧಕ್ಕೆ ನೀಡಿರುವ ಕಾರಣಗಳು ವಿವಾದಕ್ಕೆ ಕಾರಣವಾಗಿವೆ. 'ಭಾನು ಮುಸ್ತಾಪ್ ಅವರು ಗೋಮಾಂಸ ಸೇವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಕುಟುಂಬದಲ್ಲಿ ಯಾರಾದರೂ ಗೋಮಾಂಸ ಸೇವಿಸಿರಬಹುದು. ಜೊತೆಗೆ, ಅವರಿಗೆ ಚಾಮುಂಡೇಶ್ವರಿ ದೇವಿ ಪದ್ಧತಿ ಮತ್ತು ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಗೊತ್ತಿರುವುದಿಲ್ಲ. ಒಬ್ಬ ಮುಸ್ಲಿಂ ಮಹಿಳೆಯಾಗಿರುವುದರಿಂದ ಅವರಿಗೆ ಹಿಂದೂ ಧರ್ಮದಲ್ಲಿ ನಡೆಯುವ ಪೂಜೆ-ಪುನಸ್ಕಾರಗಳ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ಕೂಡಲೇ ಅವರ ಹೆಸರನ್ನು ದಸರಾ ಉದ್ಘಾಟನೆಯಿಂದ ಕೈಬಿಡಬೇಕು' ಎಂದು ಶಿವಕುಮಾರ್ ನಾಯ್ಕ್ ಒತ್ತಾಯಿಸಿದ್ದಾರೆ.
ಹಿಂದೂ ಕವಿ, ಲೇಖಕರಿಗೆ ಆದ್ಯತೆ ನೀಡುವಂತೆ ಒತ್ತಾಯ:
ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ತಿಳಿದಿರುವ ಕವಿಗಳು, ಲೇಖಕರು, ಅಥವಾ ಮಠಾಧೀಶರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡುವಂತೆ ಸಂಘಟನೆಗಳ ಒಕ್ಕೂಟವು ಸರ್ಕಾರವನ್ನು ಆಗ್ರಹಿಸಿದೆ. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಡೆಯುತ್ತಿರುವ ಈ ಪ್ರತಿಭಟನೆಗಳು ದಸರಾ ಮಹೋತ್ಸವಕ್ಕೆ ಧಾರ್ಮಿಕ ವಿವಾದದ ಛಾಯೆಯನ್ನು ತಂದಿರುವುದಂತೂ ನಿಜ. ಈ ಕುರಿತು ಸರ್ಕಾರದ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
