ಶಿವನಸಮುದ್ರದಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಜೆಡಿಎಸ್ ಸಾಥ್ ನೀಡುತ್ತಿದೆ ಎಂದು ಆರೋಪಿಸಿದರು. 

ಮಂಡ್ಯ/ಮಳವಳ್ಳಿ (ಸೆ.14): ಬಿಜೆಪಿಯವರು ಧರ್ಮ-ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಪ್ರಚೋದನೆ ಮಾಡುವುದೇ ವಿಪಕ್ಷದವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಶಿವನಸಮುದ್ರದ ಬ್ಲಪ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಗಗನಚುಕ್ಕಿ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದು, ಎತ್ತಿಕಟ್ಟುವುದು ಬಿಜೆಪಿಯವರ ಕೆಲಸ. ಇದರ ಜೊತೆಗೆ ಈಗ ಜೆಡಿಎಸ್‌ನವರೂ ಸೇರಿಕೊಂಡಿದ್ದಾರೆ. ಅವರ ಮಾತುಗಳಿಗೆ ಯಾರೂ ಕಿವಿಗೊಡಬಾರದು ಎಂದರು.

ರಾಜ್ಯದಲ್ಲಿ ಉತ್ತಮ ಮಳೆಯಿಂದ 82 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾನು ಈಗಾಗಲೇ ಡೀಸಿ ಮತ್ತು ಸಿಇಒ ಅವರ ಸಭೆ ಕರೆದು ಹತ್ತು ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಕಳೆದ ವರ್ಷ ಕಲಬುರಗಿಯಲ್ಲಿ ಆದ ಮಳೆ ಹಾನಿಗೆ ₹600 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಈ ವರ್ಷವೂ ಬೆಳೆ ಪರಿಹಾರ ನೀಡುವುದಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ನಮ್ಮಲ್ಲಿ ಅಭಿವೃದ್ಧಿಗೂ ಹಣವಿದೆ, ಗ್ಯಾರಂಟಿ ಯೋಜನೆಗಳಿಗೂ ಹಣವಿದೆ. ಬೆಳೆ ಪರಿಹಾರಕ್ಕೂ ಹಣವಿದೆ. ಈ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ ಎಂದರು.