ಸಚಿವ ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್‌ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆದೇ ತೀರುತ್ತದೆ ಎಂದು ಸವಾಲು ಹಾಕಿದ್ದು, ಜೆಡಿಎಸ್ ಜೊತೆ ಸಮನ್ವಯ ಸಮಿತಿ ರಚಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಬೆಂಗಳೂರು (ಅ.21): ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಈ ರೀತಿ ದುರ್ಬುದ್ದಿ ಬಂದಿದೆ ಗೊತ್ತಿಲ್ಲ.ಅನವಶ್ಯಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಟೀಕೆ ಮಾಡುವುದು ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರಾನೋ ಅಥವಾ ಸಿಎಂ ಕುರ್ಚಿಗೆ ಟವಲ್ ಆಗುವ ತಂತ್ರನೋ ಗೊತ್ತಿಲ್ಲ. ಆದರೆ, ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚನ ನಡೆದೇ ನಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎರಡು ಪಕ್ಷಗಳು (ಜೆಡಿಎಸ್-ಬಿಜೆಪಿ) ಒಟ್ಟಾಗಿ ಹೋರಾಟ ಮಾಡುವ ಕೆಲಸ ಮಾಡುತ್ತೇವೆ. ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಯಾಕೆ ಈ ರೀತಿ ದುರ್ಬುದ್ದಿ ಬಂದಿದೆ ಗೊತ್ತಿಲ್ಲ. ಅನವಶ್ಯಕವಾಗಿ RSS ಅನ್ನು ಟೀಕೆ ಮಾಡುವುದು ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರಾನೋ ಅಥವಾ ಸಿಎಂ ಕುರ್ಚಿಗೆ ಟವಲ್ ಆಗುವ ತಂತ್ರನೋ ಗೊತ್ತಿಲ್ಲ ಎಂದು ಹರಿಹಾಯ್ದರು.

ಅಪ್ಪನೇ ಹೇಳಿದಂತೆ ಮಗ ಈಗ ಏಕಾಂಗಿ:

ಇನ್ನು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದಂತೆ ಪ್ರಿಯಾಂಕ್ ಖರ್ಗೆ ಏಕಾಂಗಿ ಆಗಿದ್ದಾರೆ. ಆಡಳಿತ ಪಕ್ಷದ ಯಾವುದೇ ಸದಸ್ಯರು ಅವರ ಬೆಂಬಲಕ್ಕೆ ಬರ್ತಿಲ್ಲ. ಗಾಂಧಿ ಕುಟುಂಬದ ನೆಹರುಗಾಂಧಿ, ಇಂದಿರಾಗಾಂಧಿ ಯಾರ ಕೈಯಲ್ಲೂ RSS ಮಣಿಸಲು ಸಾಧ್ಯವಾಗಿಲ್ಲ. ಇದೀಗ RSS ಬಗ್ಗೆ ಹೇಳಿಕೆ ಕೊಟ್ಟು ವಾಸ್ತವಿಕೆ ಸತ್ಯ ಮರೆಮಾಚಲು ಮುಂದಾಗಿದ್ದಾರೆ. ಅವರ ವೈಫಲ್ಯ ಮುಚ್ಚಿ ಹಾಕಲು ಈ ರೀತಿ ಪ್ರಚಾರ ಮಾಡ್ತಿದ್ದಾರೆ ಎಂದರು.

ಚಿತ್ತಾಪುರ ಸೇರಿ ರಾಜ್ಯದ ಎಲ್ಲೆಡೆ ಆರ್‌ಎಸ್‌ಎಸ್ ಪಥಸಂಚನ: 

ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಂಥ ಸಂಚಲನ‌ ಆಗಬೇಕು, ಆಗೇ ಆಗುತ್ತದೆ. RSS 100 ವರ್ಷ ಪೂರೈಸಿರುವ ಹಿನ್ನೆಲೆ‌ಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಇದೇ ರೀತಿ ಆರ್‌ಎಸ್‌ಎಸ್ ಪಥಸಂಚಲನ ನಡೆಯುತ್ತಿದೆ. ನಾವು ತಮ್ಮ ಮೂಲಕ ಹೇಳೋದಿಷ್ಟೇ, ಕೆಲಸಕ್ಕೆ ಬಾರದೇ ಇರೋದನ್ನ ಮಾತಾಡೋದನ್ನ ಬಿಡಿ. ಕಳೆದ 40-50 ವರ್ಷದಿಂದ ತಮ್ಮ ತಂದೆ ಮತ್ತು ತಾವು ಅಧಿಕಾರದಲ್ಲಿದ್ದೀರಿ. ಆದರೆ, ಗುಲ್ಬರ್ಗಾ ಶೈಕ್ಷಣಿಕವಾಗಿ ಭಾರೀ ಹಿಂದುಳಿದ ಜಿಲ್ಲೆಯಾಗಿ ಉಳಿದಿದೆ. ಇದಕ್ಕೆ ಯಾರು ಹೊಣೆ ಅಂತ ನೀವೇ ಹೇಳಿ. ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಅನುದಾನ ಕೊಟ್ಟಿತ್ತು? ಕಾಂಗ್ರೆಸ್ ಸರ್ಕಾರ ಎಷ್ಟು ಅನುಧಾನ ಕೊಟ್ಟಿದೆ, ಎಷ್ಟು ಅಭಿವೃದ್ಧಿ ಆಗಿದೆ ನೀವೇ ನೋಡಿ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿದರೆ ಒಳ್ಳೆಯದಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ತಿರುಗೇಟು ಕೊಟ್ಟರು.

ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ:

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ಗಣಪತಿ ಹಬ್ಬಕ್ಕೆ ಭೇಟಿಗೆ ಪ್ರಯತ್ನ ಮಾಡಿದ್ವಿ ಆಗಿರಲಿಲ್ಲ. ಆದ್ದರಿಂದ ಇಂದು ಬಂದು ಶುಭಾಶಯ ಕೋರಿದ್ದೇವೆ. ರಾಜ್ಯ ರಾಜಕೀಯದ ಪರಿಸ್ಥಿತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರ ಮನಸ್ಸಿನಲ್ಲೂ ಸಮನ್ವಯ ಸಮಿತಿ ಆಗಬೇಕು ಅಂತ‌ ಇತ್ತು. ಅವರ ಬಳಿ ಕೆಲವು ಸಲಹೆ ಕೇಳಿದ್ದೇನೆ. ಗ್ರೇಟರ್ ಬೆಂಗಳೂರು ಚುನಾವಣೆ ವಿಚಾರವಾಗಿ ಕಮಿಟಿ ಮಾಡೋಣ ಅಂತ ನಿರ್ಧರಿಸಿದ್ದೇವೆ. ರಾಜ್ಯಕ್ಕೂ ಒಂದು ಪ್ರತ್ಯೇಕ ಕಮಿಟಿ ಮಾಡುವ ಸಲಹೆ ನೀಡಿದ್ದಾರೆ. ಮುಂದಿನ 8-10 ದಿನಗಳಲ್ಲಿ ಕಮಿಟಿ ಸದಸ್ಯರು ಹೆಸರು ತಿಳಿಸೋದಾಗಿ ಹೇಳಿದ್ದಾರೆ. ನಾನು ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಎರಡೂ ಪಕ್ಷಗಳ ಸಮನ್ವಯ ಸಮಿತಿ ಬಗ್ಗೆ ತಿಳಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಹಿತಿ ನೀಡಿದರು.