ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇಂದೂ ಸಹ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮತ್ತೆ ಮಳೆ ಚಟುವಟಿಕೆಗಳು ತೀವ್ರಗೊಂಡಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಮೂರು ರಾತ್ರಿ ನಿರಂತರವಾಗಿ ಧಾರಾಕಾರ ಮಳೆ ಸುರಿದ ಪರಿಣಾಮ, ನಗರದಲ್ಲಿ ಅನೇಕ ಕಡೆಗಳಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಇದೀಗ ಹವಾಮಾನ ಇಲಾಖೆ ಇಂದು ಕೂಡಾ ಅಂದರೆ ಅಕ್ಟೋಬರ್ 12ರಂದು ಕೂಡ ಮಳೆ ಬೀಳುವ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ವರದಿ ನೀಡಿರುವಂತೆ ಇಂದು ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಹ ಮಳೆಯ ಚಟುವಟಿಕೆ ತೀವ್ರವಾಗುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆ ಒಟ್ಟು 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಯೆಲ್ಲೋ ಅಲರ್ಟ್ ಹೊರಡಿಸಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೊಡಗು ಜಿಲ್ಲೆಗಳು ಸೇರಿವೆ.

ಕಳೆದ ಮೂರು ದಿನಗಳಿಂದ ರಾತ್ರಿ ವೇಳೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನೂ ಅಧಿಕಾರಿಗಳು ಸೂಚಿಸಿದ್ದಾರೆ. ಮಳೆ ಸಮಯದಲ್ಲಿ ವಾಹನ ಚಲಾವಣೆ ಮಾಡುವವರು ಹಾಗೂ ಕೆಲಸದ ನಿಮಿತ್ತ ಹೊರಗಡೆ ತೆರಳುವವರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಪಂಪ್‌ಸೆಟ್‌ಗಳ ಮೂಲಕ ನೀರು ಹೊರಹಾಕುವ ವ್ಯವಸ್ಥೆ

ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಜಿಲ್ಲಾ ಆಡಳಿತಗಳು ತುರ್ತು ಕ್ರಮಗಳಿಗೆ ಸಿದ್ಧವಾಗಿವೆ. ನೀರು ನಿಲುವು ಪ್ರದೇಶಗಳಲ್ಲಿ ಪಂಪ್‌ಸೆಟ್‌ಗಳ ಮೂಲಕ ನೀರು ಹೊರಹಾಕುವ ವ್ಯವಸ್ಥೆ, ಅಗತ್ಯ ಸಿಬ್ಬಂದಿ ನಿಯೋಜನೆ ಮತ್ತು ನಿಯಂತ್ರಣ ಕೊಠಡಿಗಳ ಮೂಲಕ ನಿಗಾ ಇಡಲಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 48 ಗಂಟೆಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.