ಬೆಂಗಳೂರಿನ ಯುವ ತಂತ್ರಜ್ಞರ ಆವಿಷ್ಕಾರಗಳು ಆಪರೇಷನ್ ಸಿಂದೂರ್‌ನ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಿದೆ. ಪ್ರಧಾನಿ ಮೋದಿ ಈ ಸಾಧನೆಗಾಗಿ ಬೆಂಗಳೂರಿನ ಯುವಜನರನ್ನು ಶ್ಲಾಘಿಸಿದ್ದಾರೆ.
ಬೆಂಗಳೂರು (ಆಗಸ್ಟ್ 10): ಬೆಂಗಳೂರು ನವ ಭಾರತದ ಸಂಕೇತವಾಗಿ ಮಿಂಚಿದ್ದು, ಇಲ್ಲಿನ ಯುವ ತಂತ್ರಜ್ಞರ ಆವಿಷ್ಕಾರಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸಿ, ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ ಯಶಸ್ಸು ಕಂಡಿದೆ. ಈ ಸಾಧನೆಗಾಗಿ ಬೆಂಗಳೂರಿನ ಯುವಜನರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿದ ಪ್ರಧಾನಿ, ನಂತರ ಎಲೆಕ್ಟ್ರಾನಿಕ್ಸ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಆಪರೇಷನ್ ಸಿಂದೂರ್‌ನ ಯಶಸ್ಸು ಭಾರತದ ಹೊಸ ಮುಖವನ್ನು ಜಗತ್ತಿಗೆ ತೋರಿಸಿದೆ. ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿ, ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರಿಸಿದ ಶಕ್ತಿ ನಮ್ಮ ತಂತ್ರಜ್ಞಾನದಿಂದ ಸಾಧ್ಯವಾಯಿತು. ಈ ತಾಂತ್ರಿಕ ಪರಾಕ್ರಮದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
PM Modi said that Bengaluru Shines in Operation Sindoor Metro Yellow Line Launch & Tech Triumph
ಆಪರೇಷನ್ ಸಿಂದೂರ್‌ನ ಯಶಸ್ಸಿನ ಹಿಂದೆ ಬೆಂಗಳೂರಿನ ಯುವ ತಂತ್ರಜ್ಞರ ಶ್ರಮವಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಎಂದು ಮೋದಿ ಕನ್ನಡಿಗರನ್ನು ಕೊಂಡಾಡಿದರು. ಬೆಂಗಳೂರನ್ನು ಶ್ರೇಷ್ಠ ಜಾಗತಿಕ ನಗರವೆಂದು ಬಣ್ಣಿಸಿದ ಅವರು, ನಾವು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಬೇಕು, ಮುನ್ನಡೆಯಬೇಕು. ನಮ್ಮ ನಗರಗಳು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದರು. ಈ ಐತಿಹಾಸಿಕ ಕಾರ್ಯಾಚರಣೆಯ ಯಶಸ್ಸು ಮತ್ತು ಬೆಂಗಳೂರಿನ ಕೊಡುಗೆಯಿಂದ ಭಾರತದ ತಾಂತ್ರಿಕ ಸಾಮರ್ಥ್ಯ ಜಗತ್ತಿನಾದ್ಯಂತ ಗಮನ ಸೆಳೆದಿದೆ.
