ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.
ಬೆಂಗಳೂರು: ಇಂದು ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಂದೇ ಭಾರತ್ ರೈಲು ಮತ್ತು ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು. ನಮ್ಮ ಮೆಟ್ರೋ 3ನೇ ಹಂತಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿಗಳು, ಬೆಂಗಳೂರಿಗೆ ಭೇಟಿ ನೀಡಿರೋದು ಸಂತಸವನ್ನುಂಟು ಮಾಡಿದೆ ಎಂದರು. ಎಂದಿನಂತೆ ಪ್ರಧಾನಿಯವರು ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸಿದರು.
ಬೆಂಗಳೂರು ಹೊಸ ಭಾರತ ಬೆಳವಣಿಗೆಯ ಸಂಕೇತ
ಎಂದಿನಂತೆ ಪ್ರಧಾನಿಯವರು ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸಿದರು. ಕರ್ನಾಟಕದ ಭೂಮಿ ಮೇಲೆ ಕಾಲಿಡುತ್ತಿದ್ದಂತೆ ನಮ್ಮತನದ ಅನುಭವ ನೀಡುತ್ತದೆ. ಇಲ್ಲಿಯ ಸಂಸ್ಕೃತಿ, ಜನರ ಪ್ರೀತಿ ಮತ್ತು ಕನ್ನಡ ಭಾಷೆಯ ಸಿಹಿತನ ಇಷ್ಟವಾಗುತ್ತದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕುರಿತು ಹಲವು ವಿಷಯಗಳನ್ನು ಮಾತನಾಡಿದರು. ಬೆಂಗಳೂರು ಹೊಸ ಭಾರತ ಬೆಳವಣಿಗೆಯ ಸಂಕೇತವಾಗಿದೆ. ಗ್ಲೋಬಲ್ ಐಟಿ ಮ್ಯಾಪ್‌ನಲ್ಲಿ ಬೆಂಗಳೂರು ಭಾರತದ ಬಾವುಟ ಹಾರಿಸುತ್ತಿದೆ. ಇದೆಲ್ಲಾ ಬೆಂಗಳೂರಿನ ಜನತೆ ಪ್ರತಿಭೆಯಿಂದ ಸಾಧ್ಯವಾಗುತ್ತದೆ. ಭವಿಷ್ಯಕ್ಕಾಗಿ ನಾವು ಬೆಂಗಳೂರು ನಗರವನ್ನು ಮತ್ತಷ್ಟು ಸಿದ್ಧಪಡಿಸಬೇಕಿದೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ.
ಇಂದು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಹಾಗೆಯೇ ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಿ, ಮೂರನೇ ಹಂತದ ಮೆಟ್ರೋಗೆ ಅಡಿಪಾಯ ಹಾಕಲಾಗಿದೆ. ಆಪರೇಷನ್ ಸಿಂದೂರ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಉಗ್ರ ರಕ್ಷಣೆಗೆ ಮುಂದಾಗಿರುವ ಪಾಕಿಸ್ತಾನ ಮಂಡಿಯೂರುವಂತೆ ಭಾರತ ಮಾಡಲಾಗಿದೆ. ಕೆಲವೇ ನಿಮಿಷಗಳಲ್ಲಿ ಆಪರೇಷನ್ ಸಿಂದೂರ ನಡೆದಿದೆ. ಆಪರೇಷನ್ ಸಿಂದೂರ ಸಕ್ಸಸ್‌ನಲ್ಲಿ ತಂತ್ರಜ್ಞಾನವಿದೆ. ಇದರಲ್ಲಿ ಬೆಂಗಳೂರಿನ ಯುವಕರ ಪಾತ್ರವಿದೆ ಎಂದು ಹೇಳಿದರು.
ಕಾರ್ಪೋರೇಟ್ ಕಂಪನಿಗಳಿಗೆ ಧನ್ಯವಾದ
ತಂತ್ರಜ್ಞಾನದಲ್ಲಿ ಸ್ಪರ್ಧೆ ಮಾಡುತ್ತ ಮುನ್ನಡೆಯನ್ನು ಕಾಯ್ದುಕೊಳ್ಳಬೇಕಿದೆ. ಮೆಟ್ರೋ ರೈಲುಗಳಿಂದಾಗಿ ನಗರಗಳು ಸ್ಮಾರ್ಟ್ ಆಗುತ್ತವೆ. ಸಾರ್ವಜನಿಕ ಸಾರಿಗೆಗೆ ಮೆಟ್ರೋಗಳು ಹೊಸ ಆಯಾನವನ್ನ ನೀಡಿವೆ. ಇದೇ ವೇಳೆ ಮೆಟ್ರೋ ಕಾಮಗಾರಿಗೆ ಸಹಕರಿಸಿರುವ ಇನ್ಪೋಸಿಸ್ ಸೇರಿದಂತೆ ಕಾರ್ಪೋರೇಟ್ ಕಂಪನಿಗಳಿಗೆ ಧನ್ಯವಾದಗಳನ್ನು ಪ್ರಧಾನಿ ಮೋದಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಡಿಜಿಟಲ್ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ
ಮುಂದುವರಿದ ಮಾತನಾಡಿದ ಪ್ರಧಾನಿಗಳು, ವಿಕಸಿತ ಭಾರತ, ಮೇಕ್ ಇನ್ ಇಂಡಿಯಾ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು. ಇಂದು ದೇಶದಲ್ಲಿ ಡಿಜಿಟಲೈಸೇನ್ ಗ್ರಾಮ ಗ್ರಾಮಗಳಿಗೂ ತಲುಪಿದೆ. ವಿಶ್ವದ ಶೇ.50ರಷ್ಟು ಜನಸಂಖ್ಯೆಯಷ್ಟು ಯುಪಿಐ ಪೇಮೆಂಟ್ ಮಾಡಲಾಗುತ್ತಿದೆ. ತಂತ್ರಜ್ಞಾನದಿಂದ ಸಾಮಾನ್ಯ ಜನರು ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರ ಡಿಜಿಟಲ್ ತಂತ್ರಜ್ಞಾನಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇಂದು ಪ್ರತಿಯೊಂದು ವಲಯಗಳಲ್ಲಿಯೂ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಅದರಲ್ಲಿಯೂ ಬೆಂಗಳೂರು ನಗರ ಅತ್ಯಧಿಕವಾಗಿ ಡಿಜಟಲೀಕರಣವಾಗುತ್ತಿದೆ. ನಮ್ಮ ಎಲ್ಲಾ ಪ್ರಯತ್ನಗಳು ಕರ್ನಾಟಕ ಅಭಿವೃದ್ಧಿಗೆ ಸಹಾಯಕವಾಗಲಿವೆ ಎಂದು ಹೇಳಿದರು,.

