ನಗರ್ತಪೇಟೆಯ ಪ್ಲಾಸ್ಟಿಕ್ ಮಳಿಗೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಐವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
ಬೆಂಗಳೂರು: ನಗರದ ಹೃದಯ ಭಾಗವಾದ ನಗರ್ತಪೇಟೆಯಲ್ಲಿರುವ ಪ್ಲಾಸ್ಟಿಕ್ ಮ್ಯಾಟ್ ಹಾಗೂ ಕಿಚನ್‌ವೇರ್ ಮಳಿಗೆಯಲ್ಲಿ ಶನಿವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 5 ಜನ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಎರಡು ಮೃತದೇಹ ಪತ್ತೆಯಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮುಂಜಾನೆ ಸುಮಾರು 3.30ರ ಸಮಯದಲ್ಲಿ ಮಳಿಗೆಯೊಳಗೆ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕಟ್ಟಡದೊಳಗೆ ಅಗ್ನಿಶಾಮಕ ಸಿಬ್ಬಂದಿ ಪ್ರವೇಶಿಸಲು ಬಹಳ ಕಷ್ಟ ಉಂಟಾಯಿತು. ಆಕ್ಸಿಜನ್ ಸಿಲಿಂಡರ್‌ಗಳ ನೆರವಿನಿಂದ ಸಿಬ್ಬಂದಿ ಒಳನುಗ್ಗಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನೆ ನಡೆದ ಕಟ್ಟಡವು ಮೂರು ಮಹಡಿಗಳಿದ್ದು, ಪ್ಲಾಸ್ಟಿಕ್ ವಸ್ತುಗಳು ಮತ್ತು ಕಿಚನ್‌ವೇರ್ ಸಾಮಾನುಗಳಿಂದ ತುಂಬಿಕೊಂಡಿತ್ತು. ಇದರಿಂದ ಹೊಗೆ ಆವರಿಸಿಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆ ಹೆಚ್ಚು ಕಷ್ಟಕರವಾಯಿತು.
ಅಗ್ನಿಶಾಮಕ ದಳದ ಹರಸಾಹಸ
ಘಟನಾ ಸ್ಥಳಕ್ಕೆ ಒಟ್ಟು ಐದು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ನಡೆಸಿದವು. ಲ್ಯಾಡರ್ ಹಾಗೂ ಕಿಟಕಿಗಳನ್ನು ಒಡೆದು ಒಳಗೆ ಪ್ರವೇಶಿಸಲು ಸಿಬ್ಬಂದಿ ಪ್ರಯತ್ನಿಸಿದರು. ಕಟ್ಟಡದ ಒಳಗಿನ ಮೆಟ್ಟಿಲುಗಳ ಮೂಲಕ ಹೋಗುವುದು ಅಸಾಧ್ಯವಾಗಿದ್ದರಿಂದ ವಿಶೇಷ ಯಂತ್ರೋಪಕರಣಗಳ ನೆರವು ಪಡೆದು ಗೋಡೆ ಕತ್ತರಿಸಿ ಕಾರ್ಯಾಚರಣೆಯೂ ನಡೆಯಿತು.
ಕುಟುಂಬ ಸಿಲುಕಿ ದುರ್ಮರಣ
ಕಟ್ಟಡದೊಳಗೆ ರಾಜಸ್ಥಾನ ಮೂಲದ ಮದನ್ ಕುಮಾರ್ (34) ಕುಟುಂಬ ವಾಸವಾಗಿದ್ದು, ಘಟನೆ ಸಮಯದಲ್ಲಿ ಅವರ ಪತ್ನಿ ಸಂಗೀತಾ ಹಾಗೂ ಇಬ್ಬರು ಮಕ್ಕಳು ವಿಹಾನ್ ಮತ್ತು ನಿತೇಶ್ ಒಳಗಡೆಯೇ ಸಿಲುಕಿಕೊಂಡಿದ್ದರು. ಮದನ್ ಹೊರಗೆ ಬರಲು ಯತ್ನಿಸಿದರೂ, ಬೆಂಕಿಗೆ ತುತ್ತಾಗಿ ಅವರ ದೇಹವೂ ಸುಟ್ಟು ಕರಕಲಾಗಿದೆ. ಇದೆ ಕಟ್ಟಡದಲ್ಲಿ ವಾಸವಿದ್ದ ಸುರೇಶ್ (36) ಎಂಬ ಮತ್ತೊಬ್ಬರು ಸಹ ದುರ್ಘಟನೆಯಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಒಟ್ಟು ಐವರು ಈ ದುರಂತದಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹಗಳು ವಿಕ್ಟೋರಿಯಾ ಆಸ್ಪತ್ರೆಗೆ
ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಪರಿಶ್ರಮದ ಬಳಿಕ ಈಗಾಗಲೇ ಎರಡು ಮೃತದೇಹಗಳನ್ನು ಹೊರತೆಗೆದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ಘಟಕಕ್ಕೆ ರವಾನಿಸಿದ್ದಾರೆ. ವೈದ್ಯಕೀಯ ಮುಖ್ಯಸ್ಥ ಡಾ. ಯೋಗೀಶ್ವರಪ್ಪ ತಿಳಿಸಿದ್ದಾರೆ. “ಬೆಳಗ್ಗೆ 7.30ರ ಸುಮಾರಿಗೆ ಸುಟ್ಟ ಸ್ಥಿತಿಯಲ್ಲೇ ಮೃತದೇಹಗಳನ್ನು ತರಲಾಗಿದೆ. ಪರೀಕ್ಷೆಗಾಗಿ ಫಾರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿರುವುದರಿಂದ ಗುರುತಿಸಲು ಕಷ್ಟವಾಗಿದೆ.”
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಆಯುಕ್ತ ವಂಶೀ ಕೃಷ್ಣ, ಡಿಸಿಪಿ ಅಕ್ಷಯ್ ಮಜೀಂದ್ರ ಹಾಗೂ ಮಾಜಿ ಶಾಸಕ ಆರ್.ವಿ. ದೇವರಾಜ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪೋಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆಯಂತೆ, “ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಗ್ರೌಂಡ್ ಫ್ಲೋರ್‌ನಲ್ಲಿದ್ದ ಗೋದಾಮಿನಿಂದ ಬೆಂಕಿ ಪ್ರಾರಂಭವಾಗಿ ಮೇಲಿನ ಮಹಡಿಗಳಿಗೆ ಹರಡಿದೆ. ಕಟ್ಟಡದಲ್ಲಿದ್ದ ಬಹುತೇಕರು ಹೊರಬಂದರೂ, ಒಂದು ಕುಟುಂಬ ಒಳಗೆ ಸಿಲುಕಿರುವ ಮಾಹಿತಿ ಇದೆ. ಇನ್ನೂ ಮೃತದೇಹಗಳು ಇರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ.”
ಸುರಕ್ಷತಾ ಕ್ರಮಗಳ ಕೊರತೆ
ಕರ್ನಾಟಕ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಲಾರಾಮ್ ಚೌಧರಿ ಅವರು ಘಟನೆಗೆ ಪ್ರತಿಕ್ರಿಯಿಸಿ, “ಹಳೆಯ ಬೆಂಗಳೂರು ಪ್ರದೇಶದಲ್ಲಿ ಕಟ್ಟಡಗಳು ತುಂಬಾ ಚಿಕ್ಕ ಜಾಗದಲ್ಲಿ ನಿರ್ಮಾಣವಾಗಿವೆ. ಅಗ್ನಿಶಾಮಕ ವಾಹನಗಳಿಗೆ ಸರಿಯಾದ ಪ್ರವೇಶವಿಲ್ಲ. ಹೀಗಾಗಿ ಇಂತಹ ಅವಘಡಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು” ಎಂದು ಹೇಳಿದರು.
ನಗರ್ತಪೇಟೆಯ ಈ ದುರಂತದಲ್ಲಿ ಐವರ ಸಾವಿನ ಶಂಕೆ ವ್ಯಕ್ತವಾಗಿದ್ದು, ಪ್ರದೇಶದ ಜನರಲ್ಲಿ ಆತಂಕ ಮತ್ತು ದುಃಖದ ವಾತಾವರಣ ಆವರಿಸಿದೆ. ಬೆಂಕಿ ಅವಘಡದಿಂದಾಗಿ ಹಲವು ವಸ್ತುಗಳು ಹಾಗೂ ವ್ಯಾಪಾರ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ಅವಘಡದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
