BMRCL ಬೆಂಗಳೂರಿನಲ್ಲಿ ಮೆಟ್ರೋ ಟೋಕನ್‌ಗಾಗಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. 15 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ತಗುಲುತ್ತಿದ್ದು, ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸಿ, ಟೋಕನ್ ವ್ಯವಸ್ಥೆ ಸುಧಾರಿಸುವಂತೆ ವಿದ್ಯಾರ್ಥಿಗಳ ಮನವಿ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸೇವೆಯ ಮೇಲೆ ಅವಲಂಬಿತರಾಗಿರುವ ಸಾವಿರಾರು ವಿದ್ಯಾರ್ಥಿಗಳು ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೋ ಪ್ರಯಾಣ ಸುಲಭವಾಗಬೇಕು ಎಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಈಗ ಪ್ರತಿದಿನದ ಪ್ರಯಾಣಕ್ಕಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಏಕೆಂದರೆ 15 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ! ಸಾಮಾನ್ಯವಾಗಿ ಕೇವಲ 15 ನಿಮಿಷಗಳಲ್ಲಿ ಮುಗಿಯಬೇಕಾದ ಪ್ರಯಾಣ ಇದೀಗ ಒಂದೂವರೆ ಗಂಟೆಯಾಗುತ್ತಿದ್ದು, . ಮೆಟ್ರೋ ಟೋಕನ್ ಪಡೆಯಲು ವಿದ್ಯಾರ್ಥಿಗಳು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಪರದಾಡಬೇಕಾದ ಪರಿಸ್ಥಿತಿ ಇದೆ.
- ಟೋಕನ್ ಕ್ಯೂನಲ್ಲಿ ವಿದ್ಯಾರ್ಥಿಗಳ ಹರಸಾಹಸ
- ಪ್ರತಿದಿನ ಟೋಕನ್ ಪಡೆಯಲು ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲಬೇಕಾಗಿದೆ.
- ಟೋಕನ್ ವಿತರಣೆಗೆ ಅಗತ್ಯವಾದ ಸಿಬ್ಬಂದಿ ಕೊರತೆ ಗಂಭೀರ ಸಮಸ್ಯೆಯಾಗಿದೆ.
- ಬೆಳಿಗ್ಗೆ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುತ್ತದೆ
- ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಸಿಬ್ಬಂದಿಯೇ ಇರುವುದಿಲ್ಲ.
- ತರಗತಿ ಮಿಸ್ ಮಾಡುತ್ತಿರುವ ವಿದ್ಯಾರ್ಥಿಗಳು
ಮೆಟ್ರೋ ಸಮಯಕ್ಕೆ ಸರಿಯಾಗಿ ತಲುಪುತ್ತದೆ ಎಂಬ ವಿಶ್ವಾಸದಿಂದ ತರಗತಿಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು, ಪ್ರತಿದಿನದ ಈ ತೊಂದರೆಯಿಂದ ತರಗತಿಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ಪರ್ಪಲ್ ಲೈನ್‌ನ ಕೆಲವು ನಿಲ್ದಾಣಗಳಲ್ಲಿ ಟೋಕನ್ ಪಡೆಯುವುದು ವಿದ್ಯಾರ್ಥಿಗಳಿಗೆ ದಿನನಿತ್ಯದ ಹೊಸ ಟಾಸ್ಕ್ ಆಗಿದೆ.
ಬಸ್‌ಗಿಂತ ನಿಧಾನವಾದ ಮೆಟ್ರೋ?
ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು “ಮೆಟ್ರೋ ಗಿಂತ BMTC ಬಸ್‌ನಲ್ಲಿ ಹೋಗುವುದೇ ಲೇಸು, ಬೇಗ ತಲುಪುತ್ತದೆ ಎಂದು ಬೇಸರಗೊಂಡಿದ್ದಾರೆ. ಮೆಟ್ರೋ ಸೇವೆಯ ಉದ್ದೇಶವೇ ವೇಗ ಹಾಗೂ ಸುಲಭ ಪ್ರಯಾಣ ಒದಗಿಸುವುದಾದರೂ, ವಿದ್ಯಾರ್ಥಿಗಳ ಅನುಭವ ಮಾತ್ರ ಬಹಳ ಕೆಟ್ಟದಾಗಿದೆ.
ಬಿಎಂಆರ್‌ಸಿಎಲ್‌ಗೆ ವಿದ್ಯಾರ್ಥಿಗಳ ಮನವಿ
ವಿದ್ಯಾರ್ಥಿಗಳು ತಮ್ಮ ಬೇಸರವನ್ನು ಹೊರಹಾಕುತ್ತಾ, ಬಿಎಂಆರ್‌ಸಿಎಲ್ ತಕ್ಷಣವೇ ಈ ಸಮಸ್ಯೆಯ ಮೇಲೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿಬ್ಬಂದಿ ಕೊರತೆ ನಿವಾರಣೆ ಮಾಡಿ, ಟೋಕನ್ ವಿತರಣಾ ವ್ಯವಸ್ಥೆಯನ್ನು ಸುಧಾರಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.
