- Home
- News
- State
- ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆ ವಿವಾದ, ಬೆಳಗಾವಿ ಕೆದಕೋ ಫಡ್ನವೀಸ್ ಬೆಂಗಳೂರು ವಿಚಾರದಲ್ಲೂ ಅಡ್ಡಗಾಲು ಯಾಕೆ?
ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆ ವಿವಾದ, ಬೆಳಗಾವಿ ಕೆದಕೋ ಫಡ್ನವೀಸ್ ಬೆಂಗಳೂರು ವಿಚಾರದಲ್ಲೂ ಅಡ್ಡಗಾಲು ಯಾಕೆ?
shivaji nagar metro station name change ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರನ್ನು 'ಸೇಂಟ್ ಮೇರಿ' ಎಂದು ಬದಲಾಯಿಸುವ ಸರ್ಕಾರದ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹೆಸರು ಬದಲಾವಣೆ ಪ್ರಸ್ತಾಪವು ಅಂತರರಾಜ್ಯ ರಾಜಕೀಯ ವಿವಾದಕ್ಕೆ ತಿರುಗಿದೆ.

ಶಿವಾಜಿನಗರ ಮೆಟ್ರೋ ಹೆಸರು ವಿವಾದ
\
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಈಶಾನ್ಯ ಭಾಗದಲ್ಲಿರುವ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಹೊಸ ಹೆಸರು ನೀಡುವ ಸರ್ಕಾರದ ಪ್ರಸ್ತಾಪ ಇದೀಗ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿರುವುದು ವಿವಾದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ. ಅಷ್ಟಕ್ಕೂ ಬೆಳಗಾವಿ ಗಡಿಯಲ್ಲಿ ಕನ್ನಡಿಗರನ್ನು ಕೆದಕುವ ಮಹಾರಾಷ್ಟ್ರಕ್ಕೆ ಬೆಂಗಳೂರಿನ ವಿಷ್ಯ ಯಾಕೆ ಎಂಬ ಚರ್ಚೆಗಳು ಕೂಡ ಮುನ್ನಲೆಗೆ ಬಂದಿದೆ.
ಶಿವಾಜಿನಗರದ ಐತಿಹಾಸಿಕ ಹಿನ್ನೆಲೆ
ಶಿವಾಜಿನಗರವು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಗಾಗಿ ಪ್ರಸಿದ್ಧವಾಗಿದೆ.
ಇಲ್ಲಿ ಪುರಾತನ ಕಾಲದ ಮಸೀದಿಗಳು ಇದ್ದು, ಬ್ರಿಟಿಷರ ಕಾಲದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣವೂ ಅತಿ ಹಳೆಯದು.
ಪ್ರಸಿದ್ಧ ರಸೆಲ್ ಮಾರ್ಕೆಟ್ ಇಂದಿಗೂ ವ್ಯಾಪಾರ ಕೇಂದ್ರವಾಗಿಯೇ ಉಳಿದಿದೆ.
ನಗರದಲ್ಲಿನ ಅತಿಹೆಚ್ಚು ಸರ್ಕಾರಿ ಕಚೇರಿಗಳು ಇದೇ ಪ್ರದೇಶದಲ್ಲಿ ಕೇಂದ್ರೀಕರಿಸಿರುವುದರಿಂದ ಇದು ಆಡಳಿತಾತ್ಮಕವಾಗಿ ಮಹತ್ವ ಪಡೆದಿದೆ.
ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ, ಇಲ್ಲಿ ಲಭ್ಯವಾಗುವ ಕಬಾಬ್ ಮತ್ತು ಚಾಕಣಗಳು ಕೂಡ ಪ್ರಸಿದ್ಧಿ ಪಡೆದಿವೆ.
ಹೆಸರು ಬದಲಾವಣೆ ಪ್ರಸ್ತಾಪ
ಇದೆಲ್ಲದರ ಜೊತೆಗೆ, ನಗರದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾದ ಸೇಂಟ್ ಮೇರಿ ಬೆಸಿಲಿಕಾ ಕೂಡ ಇದೇ ಭಾಗದಲ್ಲಿದೆ. ವರ್ಷಕ್ಕೊಮ್ಮೆ ನಡೆಯುವ ಕನ್ಯಾ ಮರಿಯಮ್ಮ ಜನ್ಮೋತ್ಸವ ಜಾತ್ರೆ (ನೇಟಿವಿಟಿ ಫೆಸ್ಟಿವಲ್) ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷದ ಸೆಪ್ಟೆಂಬರ್ 8 ರಂದು ನಡೆದ ಜಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಪಾಲ್ಗೊಂಡಿದ್ದರು. ಅಂದಿನ ಜಾತ್ರೆಯ ಸಮಯದಲ್ಲಿ, ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ’ಸೇಂಟ್ ಮೇರಿ’ ಎಂದು ಹೆಸರು ನೀಡಬೇಕು ಎಂಬ ಪ್ರಸ್ತಾಪ ಸಿಎಂ ಬಳಿಗೆ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಈ ಕುರಿತು ಸರ್ಕಾರ ಚಿಂತನೆ ನಡೆಸಲಿದೆ” ಎಂದಿದ್ದರು.
ಫಡ್ನವೀಸ್ ತೀವ್ರ ಆಕ್ಷೇಪ
ಈ ಹೇಳಿಕೆಯೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಅವರು, “ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಹೊಂದಿರುವ ನಿಲ್ದಾಣಕ್ಕೆ ಬೇರೇ ಹೆಸರು ಇಡುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಈ ನಿರ್ಧಾರ ಕೈಗೊಂಡರೆ ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು. ಇನ್ನೂ ಮುಂದೆ ಸಿದ್ದರಾಮಯ್ಯನವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ವ್ಯಂಗ್ಯವಾಡಿದರು.
ರಾಜಕೀಯ ಗಣ್ಯರ ಅಭಿಪ್ರಾಯ
ಗೃಹ ಸಚಿವ ಪರಮೇಶ್ವರ್:
“ಮೆಟ್ರೋ ನಿಲ್ದಾಣದ ಹೆಸರಿನ ವಿಷಯ ಸಂಪೂರ್ಣವಾಗಿ ಬೆಂಗಳೂರಿನ ಉಸ್ತುವಾರಿ ಸಚಿವರ ತೀರ್ಮಾನಕ್ಕೆ ಸಂಬಂಧಿಸಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಕರ್ನಾಟಕದ ವಿಷಯದಲ್ಲಿ ಏನು ತಲೆಕೆಡಿಸಿಕೊಳ್ಳಬೇಕೋ ನನಗೆ ಅರ್ಥವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ:
“ಮೆಟ್ರೋ ನಿಲ್ದಾಣಕ್ಕೆ ಹೊಸ ಹೆಸರು ಇಡುವ ಕುರಿತು ಬಂದಿರುವ ಪ್ರಸ್ತಾವನೆ ಕುರಿತು ಕೇವಲ ಚಿಂತನೆ ನಡೆದಿದೆ. ಅಂತಿಮ ತೀರ್ಮಾನವಾಗಿಲ್ಲ. ಮಹಾರಾಷ್ಟ್ರ ಸಿಎಂ ಅವರ ಆಕ್ಷೇಪವನ್ನು ನಾವು ಕೇಂದ್ರ ಸರ್ಕಾರಕ್ಕೆ ತಿಳಿಸುತ್ತೇವೆ” ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್:
“ಮಹಾರಾಷ್ಟ್ರದ ಸಿಎಂ ಫಡ್ನವೀಸ್ ಅವರೇ ಶಿವಾಜಿಗೆ ಮಾಡಿದಷ್ಟು ಅಪಮಾನ ಬೇರೆ ಯಾರೂ ಮಾಡಿಲ್ಲ. ಅವರು ಮಹಾರಾಷ್ಟ್ರ ನೋಡಿಕೊಳ್ಳಲಿ, ನಮ್ಮ ರಾಜ್ಯದ ವಿಚಾರಕ್ಕೆ ತಲೆ ಹಾಕಬೇಕಾಗಿಲ್ಲ. ಶಿವಾಜಿನಗರದ ಸೇಂಟ್ ಮೇರಿ ಚರ್ಚ್ ಶಿವಾಜಿಯಷ್ಟೇ ಹಳೆಯದು. ಹೀಗಾಗಿ ಚರ್ಚ್ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದದ ರಾಜಕೀಯ ಅಂಶ
ಮೈಸೂರು ದಸರಾ, ಚಾಮುಂಡಿ ಬೆಟ್ಟದ ಪೂಜೆ, ಧರ್ಮಸ್ಥಳ–ಮದ್ದೂರು ಗಲಾಟೆ ಇತ್ಯಾದಿ ವಿಚಾರಗಳ ನಡುವೆ, ಈಗ ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಪ್ರಸ್ತಾಪ ಕೂಡ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಗೆ ಸರ್ಕಾರವನ್ನು ಟೀಕಿಸಲು ಮತ್ತೊಂದು ಅಸ್ತ್ರವಾಗಿದೆ. ಶಿವಾಜಿನಗರ ಪ್ರದೇಶದ ಐತಿಹಾಸಿಕ–ಸಾಂಸ್ಕೃತಿಕ ಹಿನ್ನೆಲೆಯ ನಡುವೆ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಕೇವಲ ಸ್ಥಳೀಯ ವಿಚಾರವೇ ಆಗಿದ್ದರೂ, ಈಗ ಅದು ಅಂತರರಾಜ್ಯ ರಾಜಕೀಯಕ್ಕೆ ತಿರುಗಿದೆ. ಅಂತಿಮವಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.