ಬೆಂಗಳೂರಿನ ಮಂತ್ರಿ ಮಾಲ್ ಬಳಿಯ ರೈಲ್ವೆ ಹಳಿಯಲ್ಲಿ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಖಾರದಪುಡಿ ಎರಚಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.
ಬೆಂಗಳೂರು (ಅ. 16): ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬನಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬರ್ಬರವಾಗಿ ಕೊಲೆಯಾದ ಹೃದಯ ವಿದ್ರಾವಕ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಭಾಗದಲ್ಲಿರುವ ರೈಲ್ವೆ ಟ್ರ್ಯಾಕ್ ಬಳಿ ಈ ಕೃತ್ಯ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೊಲೆಯಾದ ವಿದ್ಯಾರ್ಥಿನಿಯನ್ನು ಯಾಮಿನಿ ಪ್ರಿಯಾ (20) ಎಂದು ಗುರುತಿಸಲಾಗಿದೆ. ಈಕೆ ಬಿ.ಫಾರ್ಮ್ (B.Pharm) ವ್ಯಾಸಂಗ ಮಾಡುತ್ತಿದ್ದಳು. ಈ ಕೊಲೆಯನ್ನು ಆಕೆಯ ಹಿಂದೆ ಬಿದ್ದಿದ್ದ ಮತ್ತು ಪ್ರೀತಿ ನಿರಾಕರಿಸಿದ್ದ ವಿಘ್ನೇಶ್ ಎಂಬ ಯುವಕನೇ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಖಾರದಪುಡಿ ಎರಚಿ ಮಾರಣಾಂತಿಕ ಹಲ್ಲೆ:
ಇಂದು (ಅಕ್ಟೋಬರ್ 16) ಬೆಳಗ್ಗೆ 7 ಗಂಟೆಗೆ ಪರೀಕ್ಷೆ ಇದೆ ಎಂದು ಹೇಳಿ ಕಾಲೇಜಿಗೆ ತೆರಳಿದ್ದ ಪ್ರಿಯಾ, ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳು. ಬೆಳಗ್ಗೆಯೇ ಮನೆಯಿಂದ ಹೊರಟ ಯುವತಿಯ ಹಿಂದೆ ಬಿದ್ದಿದ್ದ ವಿಘ್ನೇಶ್, ಮಂತ್ರಿ ಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್‌ನವರೆಗೂ ಆಕೆಯನ್ನು ಹಿಂಬಾಲಿಸಿದ್ದಾನೆ. ರೈಲ್ವೆ ಟ್ರ್ಯಾಕ್ ಬಳಿ ಬರುತ್ತಿದ್ದಂತೆ, ಆರೋಪಿಯು ಪ್ರಿಯಾಳನ್ನು ಅಡ್ಡಗಟ್ಟಿ ಆಕೆಯ ಕಣ್ಣಿಗೆ ಖಾರದಪುಡಿ ಹಾಕಿದ್ದಾನೆ. ಇದರಿಂದ ಯುವತಿ ಕಣ್ಣು ಉಜ್ಜಿಕೊಂಡು ದಿಕ್ಕುಕಾಣದಂತಾದಾಗ, ಆತ ತನ್ನೊಂದಿಗೆ ತಂದಿದ್ದ ಹರಿತವಾದ ಆಯುಧದಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಕ್ರೂರವಾಗಿ ಕತ್ತರಿಸಿದ್ದು, ತೀವ್ರ ರಕ್ತಸ್ರಾವದಿಂದ ಪ್ರಿಯಾ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಕೃತ್ಯ ಎಸಗಿದ ಬಳಿಕ ಆ ಪಾಗಲ್ ಪ್ರೇಮಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರು ತಿಂಗಳ ಹಿಂದೆಯೇ ಪೊಲೀಸರಿಗೆ ದೂರು:
ಕೊಲೆಯಾದ ಯಾಮಿನಿ ಪ್ರಿಯಾ ತಂದೆ ಗೋಪಾಲ್ ಮಾಧ್ಯಮಗಳೊಂದಿಗೆ ಮಾತನಾಡಿ, ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 'ವಿಘ್ನೇಶ್ ಕಳೆದ ಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂದೆ ಹಿಂದೆ ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಈ ಸಂಬಂಧ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೆವು. 6 ತಿಂಗಳ ಹಿಂದೆ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು' ಎಂದು ಗೋಪಾಲ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರೀತಿ ನಿರಾಕರಿಸಿದ್ದ ಕಾರಣಕ್ಕೆ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ವಿಘ್ನೇಶ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ಕೊಲೆ ಮಾಡಿದ ದುಷ್ಕರ್ಮಿಯನ್ನು ಹಿಡಿಯಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
