ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಬಂಧನ ಮಾಡಲಾಗಿದೆ. 250 ಕೋಟಿ ರೂ. ಬೆಲೆಬಾಳುವ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ನಡೆಸಿತ್ತು. ಈ ವೇಲೆ ಸತೀಶ್ ಸೈಲ್ ಮನೆಯಲ್ಲಿ 1.41 ಕೋಟಿ ರೂ. ನಗದು ಮತ್ತು 6.75 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಉತ್ತರ ಕನ್ನಡ/ಬೆಂಗಳೂರು (ಸೆ.09): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಬಂಧಿಸಿದೆ. ಕಳೆದ ತಿಂಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು, ವಿಚಾರಣೆಯ ಬಳಿಕ ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಇ.ಡಿ. ಅಧಿಕಾರಿಗಳು ಆಗಸ್ಟ್ 13 ರಂದು ಕಾರವಾರದ ಸದಾಶಿವಗಡದಲ್ಲಿರುವ ಸತೀಶ್ ಸೈಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಇದು, ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ಈ ದಾಳಿಯ ವೇಳೆ, ಮನೆಯಲ್ಲಿ 1.41 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಜೊತೆಗೆ, ಮನೆ ಮತ್ತು ಬ್ಯಾಂಕ್ ಲಾಕರ್‌ಗಳಲ್ಲಿದ್ದ 6.75 ಕೆ.ಜಿ. ಚಿನ್ನಾಭರಣಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ವಿಚಾರಣೆ ಮತ್ತು ಬಂಧನ
ದಾಳಿಯ ನಂತರ, ಸೈಲ್ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಚೇತರಿಸಿಕೊಂಡ ಬಳಿಕ, ದಾಳಿಯ ವೇಳೆ ದೊರಕಿದ್ದ ದಾಖಲೆಗಳು ಮತ್ತು ವಸ್ತುಗಳ ಕುರಿತು ವಿಚಾರಣೆಗಾಗಿ ಇ.ಡಿ. ಅಧಿಕಾರಿಗಳು ಸೋಮವಾರ ಅವರನ್ನು ಕರೆದಿದ್ದರು. ಸೋಮವಾರ ಮತ್ತು ಮಂಗಳವಾರ ನಡೆದ ಸುದೀರ್ಘ ವಿಚಾರಣೆಯ ನಂತರ, ಇಂದು ಸಂಜೆ ಇ.ಡಿ. ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದಾರೆ.
ಪಾಕಿಸ್ತಾನದಲ್ಲಿ ವಾಯುಭಾರ ಕುಸಿತ ಪರಿಣಾಮ; ಕರ್ನಾಟಕದಲ್ಲಿ 7 ದಿನ ಭಾರೀ ಮಳೆ!
ಸತೀಶ್ ಸೈಲ್ ಬಂಧನದ ನಂತರ, ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆ ಮುಗಿದ ನಂತರ, ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ಬಂಧನವು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
