ಬೆಂಗಳೂರಿನ ಬಿಇಎಲ್ ಸಂಸ್ಥೆಯು ಟ್ರೈನಿ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರನ್ನು ನಿರ್ಲಕ್ಷಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರೋಪಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮರುಪರಿಶೀಲಿಸಿ, ಸ್ಥಳೀಯರಿಗೆ ಆದ್ಯತೆ ನೀಡುವಂತೆ ಪ್ರಾಧಿಕಾರವು ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ.
ಬೆಂಗಳೂರು (ಅ.9): ಸ್ಥಳೀಯ ಕನ್ನಡಿಗರ ಹಕ್ಕುಗಳನ್ನು ನಿರ್ಲಕ್ಷ್ಯಿಸಿ ಬಿಇಎಲ್ ಸಂಸ್ಥೆ ಆರಂಭಿಸಿರುವ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.
ಬುಧವಾರ ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು, ಬಿಇಎಲ್ ಸಂಸ್ಥೆ ಬೆಂಗಳೂರು ಕೇಂದ್ರಕ್ಕೆ ಟ್ರೈನಿ ಎಂಜಿನಿಯರುಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಧಿಸೂಚನೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಯಾವ ಅವಕಾಶವೂ ದೊರೆಯದ ರೀತಿಯಲ್ಲಿ ಈ ಅಧಿಸೂಚನೆ ಸಿದ್ಧಪಡಿಸಲಾಗಿದೆ ಎಂದು ದೂರಿದ್ದಾರೆ.
ಸಂವಿಧಾನದ ಒಕ್ಕೂಟ ತತ್ತ್ವವನ್ನು ಈ ಅಧಿಸೂಚನೆ ಗಾಳಿಗೆ ತೂರಿದೆ. ಬಿಇಎಲ್ ಸಂಸ್ಥೆಗೆ ಬೆಂಗಳೂರು ಮೊದಲಿನಿಂದಲೂ ಪ್ರಮುಖ ಚಟುವಟಿಕೆಯ ಕೇಂದ್ರವಾಗಿದ್ದು, ಸ್ಥಳೀಯ ಕನ್ನಡಿಗರು ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣಕರ್ತರಾಗಿದ್ದಾರೆ ಎನ್ನುವುದನ್ನು ಗಮನಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿಯಲ್ಲಿ ಮಾತೃಭಾಷೆ ಪದಕ್ಕೆ ಕೊಕ್? ಕನ್ನಡಕ್ಕೆ ಕಂಟಕ?
ಹಾಗಾಗಿ ಸಮತೋಲಿತ ನೇಮಕಾತಿ ಪ್ರಕ್ರಿಯೆ ರಾಷ್ಟ್ರೀಯ ಐಕ್ಯತೆಯನ್ನು ಪ್ರೋತ್ಸಾಹಿಸುತ್ತದೆ. ರಾಜ್ಯಗಳ ನಡುವಿನ ಬಾಂಧವ್ಯವನ್ನು ಅದು ವೃದ್ಧಿಸಲು ಸಹಕಾರಿಯಾಗುತ್ತದೆಎಂದು ಹೇಳಿದ್ದಾರೆ.
ಇದನ್ನೂ ಓದಿ:ಮದರಸಾಗಳ ಭೋಧಕರಿಗಿನ್ನು ಕನ್ನಡ ಕಲಿಕೆ ತರಗತಿ ಅಭಿಯಾನ: ಸಚಿವ ಜಮೀರ್ ಅಹ್ಮದ್
ಇಲಾಖೆಯ ಅಧೀನದಲ್ಲಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳಿಗೆ ತಮ್ಮ ನೇಮಕಾತಿ ಪ್ರಕ್ರಿಯೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಬೇಕು. ಇಂತಹ ಆಶಯ ಸಾಕಾರವಾದಲ್ಲಿ ಮಾತ್ರ ನಿಜವಾದ ನ್ಯಾಯದಾನ ಸಾಧ್ಯ, ಸಾಂವಿಧಾನಿಕ ತತ್ತ್ವಗಳಿಗೆ ಗೌರವ ದೊರಕಲು ಸಾಧ್ಯವೆಂದು ಪತ್ರದಲ್ಲಿ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದಾರೆ.
