ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನೆಹರು ಅವರ ಕಾಲದ ಉದಾಹರಣೆ ನೀಡಿ, ರಾಹುಲ್ ಗಾಂಧಿಗೆ ನೈತಿಕತೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಣ ಕೊಟ್ಟು ಮತ ಖರೀದಿಸಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಿಜೆಪಿಗೆ ಅಗತ್ಯ ಬಿದ್ದರೆ ಸೇರುತ್ತೇನೆ.
ಬಾಗಲಕೋಟೆ (ಆ.10): ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಮತದಾನದ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪ ಮಾಡಿದ್ದಾರೆ. ಆದರೆ, 'ರಾಹುಲ್ ಗಾಂಧಿ ದೊಡ್ಡ ಬಚ್ಚಾ. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ರೆ, ರಾಹುಲ್ ಗಾಂಧಿಗೆ ಮೊಳಕಾಲಲ್ಲಿ ಮೆದುಳು ಇದೆ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ರಾಹುಲ್ ಗಾಂಧಿ ದೊಡ್ಡ ಬಚ್ಚಾ. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ರೆ, ರಾಹುಲ್ ಗಾಂಧಿಗೆ ಮೊಳಕಾಲಲ್ಲಿ ಮೆದುಳು ಇದೆ' ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿಯವರ ಅಕ್ರಮ ಮತದಾನದ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಯತ್ನಾಳ್, ರಾಹುಲ್ ಅವರ ಮುತ್ತಾತ ನೆಹರು ಕಾಲದ ಉದಾಹರಣೆ ನೀಡಿದರು. 'ದೇಶದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸುವಾಗ, 15 ರಾಜ್ಯಗಳ ಪೈಕಿ 14 ರಾಜ್ಯಗಳು ವಲ್ಲಭಭಾಯಿ ಪಟೇಲ್ ಅವರಿಗೆ ಮತ ಹಾಕಿದ್ದವು. ಆದರೆ, ನೆಹರು ಅವರಿಗೆ ಕೇವಲ ಒಂದು ಮತ ಬಿದ್ದಿತ್ತು. ಆದರೂ ನೆಹರು ಪ್ರಧಾನಿಯಾದರು. ಹಾಗಾಗಿ ರಾಹುಲ್ ಗಾಂಧಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ಹೇಳಿದರು. ಇಂದಿರಾ ಗಾಂಧಿ ಕೂಡ ರಾಜನಾರಾಯಣ್ ವಿರುದ್ಧ ಬೋಗಸ್ ಮತದಾನ ಮಾಡಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್ ಅವಳ ಸದಸ್ಯತ್ವ ರದ್ದುಪಡಿಸಿತು ಎಂದು ನೆನಪಿಸಿದರು.
ಸಿದ್ದರಾಮಯ್ಯನ ಪರವಾಗಿ ಸಿಎಂ ಇಬ್ರಾಹಿಂ ಹೇಳಿದ್ರಲ್ರಿ:
ಬಾದಾಮಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಣ ಕೊಟ್ಟು ಮತ ಖರೀದಿಸಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, 'ಸಿದ್ದರಾಮಯ್ಯನವರ ದೋಸ್ತನೇ ಹೇಳಿದಾನಲ್ರಿ. ಇನ್ನೊಂದೆರಡು ವರ್ಷ ತಡೆಯಿರಿ, ಜಮೀರ್ ಅಹ್ಮದ್ ಖಾನ್ ಕೂಡಾ ಹೇಳುತ್ತಾನೆ' ಎಂದರು. ರಾಜಕಾರಣದಲ್ಲಿ ಹಣವಿಲ್ಲದೆ ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಬಿಜೆಪಿಗೆ ಮರಳುವ ಬಗ್ಗೆ ಯತ್ನಾಳ್ ಸ್ಪಷ್ಟನೆ:
ಬಿಜೆಪಿಗೆ ಮರಳಿ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಯತ್ನಾಳ್, 'ನಾನು ಯಾರ ಜೊತೆಯೂ ಮಾತನಾಡುವುದಿಲ್ಲ. ನಾವು ಆರಾಮವಾಗಿದ್ದೇವೆ. ಇನ್ನು ಮೂರು ವರ್ಷ ಚುನಾವಣೆ ಇದೆ. ನಾವು ಸಮಾಜ ಮತ್ತು ದೇಶದ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಗೆ ನಮ್ಮ ಅವಶ್ಯಕತೆ ಬಿದ್ದರೆ ಅವರು ತೆಗೆದುಕೊಳ್ಳುತ್ತಾರೆ. ಇಲ್ಲದಿದ್ದರೆ ನಮ್ಮದೇ ಆದ ಹಿಂದು ಪಕ್ಷ ಇದೆಯಲ್ಲಾ, ಭಗವಾ ಜಂಡಾ ಹಿಡಕೊಂಡು ಹೋಗ್ತೀವಿ' ಎಂದು ಹೇಳಿದರು.
ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಯತ್ನಾಳ್ ಆಕ್ರೋಶ:
ಯತ್ನಾಳ್ ಮತ್ತೆ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿ ಕಾರಿದರು. 'ವಿಜಯೇಂದ್ರನನ್ನೇ ಮತ್ತೆ ರಾಜ್ಯಾಧ್ಯಕ್ಷನ ಮಾಡಿ ಅವನನ್ನೇ ಮುಖ್ಯಮಂತ್ರಿ ಮಾಡ್ತೀವಿ ಎಂದು ಹೊರಟರೆ, ಬಿಜೆಪಿ ಯಾಕೆ ಸುಡುಗಾಡಿಗೆ ಹೋಗಬೇಕು? ಯಡಿಯೂರಪ್ಪನ ಮುಖ ನೋಡಲಿಕ್ಕೋ ಅಥವಾ ವಿಜಯೇಂದ್ರನ ಹಿಂದೆ 'ಜೀ' ಅನ್ನಲಿಕ್ಕೋ? ನಾ ಜೀ ಅನ್ನೋ ಮಗ ಅಲ್ಲ. ಅದರಲ್ಲೂ ವಿಜಯೇಂದ್ರನಂತಹ ಒಬ್ಬ ಕ್ರಿಮಿನಲ್ ಗೆ 'ಜೀ' ಅನ್ನೋದು ನನ್ನ ಕೈಯಲ್ಲಿ ಆಗೋದಿಲ್ಲ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಪಕ್ಷ ಕಟ್ಟುವ ಕುರಿತು ಚರ್ಚೆಯಾಗಿಲ್ಲ: ಹಿಂದೂ ಪಕ್ಷ ಕಟ್ಟುವ ಬಗ್ಗೆ ಹಿಂದೂಪರ ಸಂಘಟನೆಗಳ ಜೊತೆ ಚರ್ಚೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, ‘ಇನ್ನೂ ಆ ರೀತಿ ಚರ್ಚೆಯಾಗಿಲ್ಲ, ಯಾರ ಜೊತೆಯೂ ಮಾತನಾಡಿಲ್ಲ. ಸದ್ಯ ಬಿಜೆಪಿಯವರ ನಡೆ ನೋಡುತ್ತೇನೆ’ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
