ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ರಸ್ತೆಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಇದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ ಮತ್ತು ಕಾನೂನಿನ ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದಾರೆ.
ಬೆಂಗಳೂರು (ಅ.17): ರಾಜ್ಯದಲ್ಲಿ ಸರ್ಕಾರಿ ಆವರಣಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಬೆನ್ನಲ್ಲೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ರಸ್ತೆಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ನಮಾಜ್ (ಪ್ರಾರ್ಥನೆ) ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರವು ತಂದಿರುವ ಹೊಸ ನಿಯಮವನ್ನು ಉಲ್ಲೇಖಿಸಿದ ಯತ್ನಾಳ್, ಸಮಾನತೆ ಮತ್ತು ತಟಸ್ಥತೆಯ ತತ್ವವನ್ನು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮಾಜ್ ನಿಷೇಧಕ್ಕೆ ಯತ್ನಾಳ್ ಪ್ರಮುಖ ಕಾರಣಗಳು:
- ಸಾರ್ವಜನಿಕರಿಗೆ ತೊಂದರೆ: ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು (Footpaths) ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದರಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ.
- ಸಂವಿಧಾನದ ಹಕ್ಕಿನ ಉಲ್ಲಂಘನೆ: ಇದು ಪಾದಚಾರಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಸಂವಿಧಾನದ ವಿಧಿ 19 ಮತ್ತು 21 ರ ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಮುಕ್ತ ಸಂಚಾರ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
- ತಾರತಮ್ಯದ ಆಡಳಿತ: ಒಂದು ಕಡೆ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿ, ಮತ್ತೊಂದೆಡೆ ಅನುಮತಿ ಇಲ್ಲದೆ ಸರ್ಕಾರಿ ಕಚೇರಿಗಳು ಅಥವಾ ಸರ್ಕಾರಿ ನೆರವಿನ ಸಂಸ್ಥೆಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವುದು ಆಯ್ದ ಜಾರಿ (Selective Enforcement) ಮಾಡಿದಂತೆ ಆಗುತ್ತದೆ. ಇದು ಆಡಳಿತದ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ ಎಂದು ಯತ್ನಾಳ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
- ಸಾರ್ವಜನಿಕ ಆಸ್ತಿಯಲ್ಲಿ ನಮಾಜ್ ಮಾಡಲು ಯಾವುದೇ ವಿಶೇಷ ಅವಕಾಶ ಇರಬಾರದು ಎಂದು ತಮ್ಮ ಮನವಿಯಲ್ಲಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಕಾನೂನು ಮತ್ತು ಎಸ್.ಓ.ಪಿ. ಜಾರಿಗೆ ಆಗ್ರಹ:
ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ವಿನಂತಿಸಿದ್ದಾರೆ. ಸಾರ್ವಜನಿಕ ಸ್ಥಳಗಳನ್ನು ಅನಧಿಕೃತವಾಗಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಿದರೆ, ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಗಳ ಅಡಿಯಲ್ಲಿ ದಂಡ ವಿಧಿಸಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನ (SOP) ಅಥವಾ ಸುತ್ತೋಲೆಯನ್ನು ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕ್ರಮಗಳನ್ನು ಸಮಾನವಾಗಿ ಜಾರಿಗೊಳಿಸುವುದರಿಂದ ರಾಜ್ಯದ ಸೆಕ್ಯುಲರಿಸಂ (ಜಾತ್ಯತೀತತೆ), ಕಾನೂನಿನ ಮುಂದೆ ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಬದ್ಧತೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸುವ್ಯವಸ್ಥೆ ಮತ್ತು ಶಿಸ್ತನ್ನು ಉತ್ತೇಜಿಸಲು, ಧಾರ್ಮಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಸಂಚಾರದ ಅಡಚಣೆಯನ್ನು ತಪ್ಪಿಸಲು ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಯತ್ನಾಳ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
