ದಾವಣಗೆರೆಯ ಚನ್ನಗಿರಿಯಲ್ಲಿ ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾನು ಸಿಎಂ ಆದರೆ ಜೆಸಿಬಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದ ಯತ್ನಾಳ್!

ದಾವಣಗೆರೆ (ಸೆ.17): ನಾನು ಇಂದು ಚನ್ನಗಿರಿಗೆ ಹೋಗಬೇಕು ಎಂದಾಗ ಯಾರೋ ಹೇಳಿದ್ರು ಯತ್ನಾಳ್ ಚನ್ನಗಿರಿಗೆ ಬಂದ್ರೆ ಪೊರಕೆ ಸೇವೆ ಮಾಡುವುದಾಗಿ ಹೇಳಿದ್ರು, ಏನು ಮಾಡಿದ್ರು? ಎಂದು ಪರೋಕ್ಷವಾಗಿ ಚನ್ನಗಿರಿ ಮಾಜಿ ಶಾಸಕ ಮಾಡಾಳ್ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ ಸ್ಫೋಟಕ ಭಾಷಣ ಮಾಡಿದ ಯತ್ನಾಳ್ ಅವರು, ಮಾಜಿ ಸಿಎಂ ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ, ಈಶ್ವರಪ್ಪ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ಕುಟುಂಬ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಹಲವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನನ್ನ ಹಿರಿತನ ನೋಡಿದ್ರೆ ನಾನೇ ಸಿಎಂ ಆಗಬೇಕಿತ್ತು:

ಯಡಿಯೂರಪ್ಪ ತಂದೆ-ಮಗ ಇಬ್ಬರೂ ಲೂಟಿ ಮಾಡುತ್ತಿದ್ದಾರೆ. ತಂದೆ ಮೊದಲು ಲೂಟಿ ಮಾಡಿದ, ಈಗ ಮಗನಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ತಾವು ಬಿಜೆಪಿಯಿಂದ ಉಚ್ಚಾಟನೆಗೊಂಡಾಗ ಅಮಿತ್ ಶಾ ಮರಳಿ ಪಕ್ಷಕ್ಕೆ ಕರೆತಂದರೂ, ಯಡಿಯೂರಪ್ಪ ತಮ್ಮನ್ನು ಮಂತ್ರಿಯಾಗದಂತೆ ನೋಡಿಕೊಂಡರು. ನನ್ನ ಹಿರಿತನ ನೋಡಿದರೆ ನಾನೇ ಸಿಎಂ ಆಗಬೇಕಿತ್ತು. ರಾಜ್ಯದಲ್ಲಿ ಉಚ್ಚಾಟನೆಗೊಂಡವರೆಲ್ಲ ಸಿಎಂ ಆಗಿದ್ದಾರೆ, ನಾನೇಕೆ ಆಗಬಾರದು? ಎಂದು ಪ್ರಶ್ನಿಸಿದರು. ವೀರಶೈವ-ಲಿಂಗಾಯತ ಒಂದೇ ಎಂದು ಕೆಲವರು ಹೇಳುತ್ತಾರೆ. ಆದರೆ ಯಡಿಯೂರಪ್ಪ, ಶಾಮನೂರು, ಖಂಡ್ರೆ ಕುಟುಂಬಗಳು ತಮ್ಮ ರಾಜಕೀಯಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿವೆ. ಯಡಿಯೂರಪ್ಪ ಜಗಳ ಬೇಡ ಎನ್ನುತ್ತಾರೆ, ಯಡಿಯೂರಪ್ಪ ತಮ್ಮ ನಿಲುವು ಏನೆಂಬುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಪಂದ್ಯಕ್ಕೆ ಯತ್ನಾಳ್ ತೀವ್ರ ವಿರೋಧ; 'ನಾನು ಮುಸ್ಲಿಂಗೆ ಕನ್ವರ್ಟ್ ಆಗಿದ್ದೇನೆ ಅಂದ್ಕೊಳ್ಳಿ..' ಎಂದ ಸಿಎಂಗೂ ಟಾಂಗ್!

ಕೆಜೆಹಳ್ಳಿ ಡಿಜೆಹಳ್ಳಿ ಕೇಸ್ ನಲ್ಲಿ ಅಂದಿನ ಸಿಎಂ ಬೊಮ್ಮಾಯಿ ವೈಫಲ್ಯ ಕಾರಣ:

ಕೆಜೆಹಳ್ಳಿ-ಡಿಜೆಹಳ್ಳಿ ಕೇಸ್‌ನಲ್ಲಿ ಬೊಮ್ಮಾಯಿ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಯತ್ನಾಳ್, ಅರಗ ಜ್ಞಾನೇಂದ್ರ, ಬೊಮ್ಮಾಯಿ ಅವರ ಕೈಯಾಗ ಅಧಿಕಾರ ಕೊಟ್ಟು ಹಾಳಾಯಿತು ಎಂದರು. ನಾಳೆ ನಾನು ಸಿಎಂ ಆದರೆ ಜೆಸಿಬಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸುವೆ. ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದಿಡುವೆ. ವಿಜಯಪುರದಲ್ಲಿ ಡಿಜೆಗೆ ಪರವಾನಿಗೆ ಇದೆ, ರಾಜ್ಯದ ಬೇರೆಡೆ ಯಾಕಿಲ್ಲ? ಎಂದು ವ್ಯಂಗ್ಯವಾಡಿದರು.

ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದೆ ಬಿಡುತ್ತೇನೆ

ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ನಿರ್ಧಾರ ತೆಗೆದುಕೊಳ್ತಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಂರ ಓಲೈಕೆ ಮಾಡುತ್ತಿದ್ದಾರೆ. ಇದನ್ನ ಸುಧಾರಿಸಿಕೊಳ್ಳಬೇಕು. ಹಾಗಾದ್ರೆ 2028 ರವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲವಾದ್ರೆ ಇಷ್ಟರಲ್ಲಿಯೇ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಮಾತ್ರ ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡೋಲ್ಲ ಎಂದರು.

ಇದನ್ನೂ ಓದಿ: 'ದೇಶಕ್ಕಿಂತ ಕ್ರಿಕೆಟ್ ಮುಖ್ಯವಾಯ್ತಾ?..' ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಿಲಿಕಾನ್ ಸಿಟಿ ಮಂದಿ ತೀವ್ರ ವಿರೋಧ

ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು ಎಂದ ಯತ್ನಾಳ್:

ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ ಮೂವರು ಮಕ್ಕಳು ಇರೋರಿಗೆ ಎಲ್ಲಾ ಉಚಿತ ಸೌಲಭ್ಯ ನೀಡುವೆ. ಮದುವೆಗೆ ಐದು ಲಕ್ಷ ರೂಪಾಯಿ ಸಹ ಉಚಿತವಾಗಿ ಕೊಡುವೆ. ಸಾಬರು 25 ಹಡಿತಾರೆ ನಾವು ಕಟ್ಟಿದ ತೆರಿಗೆಯನ್ನ ಅವರೇ ತಿಂದು ತೇಗುತ್ತಿದ್ದಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. ಯತ್ನಾಳರ ಭಾಷಣ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.