ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರು ಹಸಿರು ಕುಪ್ಪಸ, ಹಳದಿ ಸೀರೆ ಉಟ್ಟು, ತಲೆಗೆ ಮಲ್ಲಿಗೆ ದಂಡೆ ಮುಡಿದುಕೊಂಡು ಬಂದು ದಸರಾಗೆ ಚಾಲನೆ ನೀಡಿದರು.

ಮೈಸೂರು : ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರು ಹಸಿರು ಕುಪ್ಪಸ, ಹಳದಿ ಸೀರೆ ಉಟ್ಟು, ತಲೆಗೆ ಮಲ್ಲಿಗೆ ದಂಡೆ ಮುಡಿದುಕೊಂಡು ಬಂದು ಚಾಮುಂಡಿದೇವಿಗೆ ನಮಿಸಿ, ಮಂಗಳಾರತಿ ಸ್ವೀಕರಿಸಿ, ಉದ್ಘಾಟನೆ ನೆರವೇರಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.

ದೇವಸ್ಥಾನದ ಒಳಗೆ ಬರುತ್ತಿದ್ದಂತೆ ಗಣೇಶ ಮೂರ್ತಿಗೆ ಕೈ ಮುಗಿದು ನಮಿಸಿದರು. ದೇವರ ಮುಂದೆ ಕೈ ಮುಗಿದು, ಹೂ ಪಡೆದು ನಮಸ್ಕರಿಸಿದರು. ಗರ್ಭಗುಡಿ ಎದುರು ಮೊದಲಿಗರಾಗಿ ನಿಂತು ದೇವಿಯ ದರ್ಶನ ಪಡೆದರು. ನಂತರ ಮಂಗಳಾರತಿ ಸ್ವೀಕರಿಸಿ ಗೌರವ ಸಲ್ಲಿಸಿದರು. ಚಾಮುಂಡೇಶ್ವರಿಯ ಪಾದ ಮುಟ್ಟಿ ನಮಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನ ಮಾಡಿದರು.

ದೇವಾಲಯದ ವತಿಯಿಂದ ಬಾನು ಮುಷ್ತಾಕ್ ಗೆ ಹಾರ ಹಾಕಿ, ಸೀರೆ ನೀಡಿ ಗೌರವಿಸಲಾಯಿತು. ಗರ್ಭಗುಡಿಯಲ್ಲಿ ಎಲ್ಲರಿಗೂ ಹೂವಿನ ಹಾರ ಹಾಕಿ ‌ಗೌರವಿಸಲಾಯಿತು. ಆದರೆ, ಅರ್ಚಕರು ಯಾರಿಗೂ ಕುಂಕುಮ ನೀಡಲಿಲ್ಲ. ಬಾನು ಮುಷ್ತಾಕ್‌, ಸಿಎಂ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿ ಬಂದವರು ತಾವಾಗಿಯೇ ಕುಂಕುಮ ಹಚ್ಚಿಕೊಂಡರು.

ಚಾಮುಂಡಿ ಅಸಹಿಷ್ಣುತೆಯನ್ನು ನಾಶ ಮಾಡಲಿ: ಬಾನು ಮುಷ್ತಾಕ್‌

ದಸರಾ ಮಾನವ ಕುಲಕ್ಕೆ ಶಾಂತಿ, ಸಹಾನುಭೂತಿ ಮತ್ತು ನ್ಯಾಯದ ದೀಪವನ್ನು ಬೆಳಗಿಸಲಿ. ಚಾಮುಂಡಿದೇವಿ ಅಸಹಿಷ್ಣುತೆಯನ್ನು ನಾಶ ಮಾಡಲಿ ಎಂದು ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಆಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮುಷ್ತಾಕ್‌, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ದೇವಿಗೆ ನಮಿಸಿ, ಮಂಗಳಾರತಿ ಸ್ವೀಕರಿಸಿದರು. ನಂತರ, ಬೆಳಗ್ಗೆ 10.40ರ ಶುಭ ವೃಶ್ಚಿಕ ಲಗ್ನದಲ್ಲಿ ಹೊರಾವರಣದಲ್ಲಿ ಬೆಳ್ಳಿಯ ರಥದಲ್ಲಿ ಇರಿಸಲಾಗಿದ್ದ ದೇವಿಯ ಉತ್ಸವ ಮೂರ್ತಿ ಮುಂದೆ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡಿ, ವಿಧ್ಯುಕ್ತವಾಗಿ ಮೈಸೂರು ದಸರಾಕ್ಕೆ ಚಾಲನೆ ನೀಡಿದರು.

ಹಿಂದೆಂದೂ ಕಾಣದ ಪೊಲೀಸರ ಬಿಗಿ ಭದ್ರತೆ ನಡುವೆ ನಗರದ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೊಂಡಿತು.

ಪ್ರೀತಿ ಹರಡುವುದೇ ಗುರಿ:

ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾನವ ಪ್ರೀತಿಯ ಸಂದೇಶ ನೀಡಿದ ಬಾನು ಮುಷ್ತಾಕ್‌, ಜಗತ್ತು ಇಂದು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿದೆ. ಹೀಗಾಗಿ ಈ ದಸರಾ ಹಬ್ಬ ಕೇವಲ ಮೈಸೂರು ನಗರಕ್ಕೆ, ನಮ್ಮ ನಾಡಿಗೆ, ದೇಶಕ್ಕೆ ಮಾತ್ರ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳೆಗಿಸಲೆಂದು ಹಾರೈಸುತ್ತೇನೆ. ಇಂದು ಬೆಳಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.