ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಪ್ರಮುಖ ಲೇಖಕಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಆಯ್ಕೆಯ ಸಮರ್ಥನೆ, ಬಾನು ಅವರ ಸಾಹಿತ್ಯ ಕೊಡುಗೆ ಮತ್ತು ಸಾಮಾಜಿಕ ಹೋರಾಟದ ಬಗ್ಗೆ ವಿವರಿಸಲಿದ್ದಾರೆ.
ಬೆಂಗಳೂರು (ಸೆ.10): ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಾಗಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ ಸಿಂಹ ಕೋರ್ಟ್ ಮೊರೆ ಹೋಗಿದ್ದು, ವಿವಾದ ತಾರಕಕ್ಕೇರಿದೆ. ಆದರೆ, ಬಾನು ಮುಷ್ತಾಕ್‌ಗೆ ಬೆಂಬಲವಾಗಿ ಕನ್ನಡ ಸಾಹಿತ್ಯ ಮತ್ತು ಹೋರಾಟದ ವಲಯದ ಪ್ರಮುಖ ಲೇಖಕಿಯರು ಒಗ್ಗಟ್ಟಿನಿಂದ ನಿಂತಿದ್ದಾರೆ. ನಾಳೆ ಬೆಳಿಗ್ಗೆ 12:30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಈ ಲೇಖಕಿಯರು ಸುದ್ದಿಗೋಷ್ಠಿ ಆಯೋಜಿಸಿದ್ದು, ಬಾನು ಮುಷ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ.
ಈ ಗೋಷ್ಠಿಯಲ್ಲಿ ಡಾ ವಸುಂಧರಾ ಭೂಪತಿ, ಡಾ ಸುನಂದಮ್ಮ, ಡಾ ಪೂರ್ಣಿಮಾ, ಅಕ್ಕೈ ಪದ್ಮಶಾಲಿ ಮತ್ತು ಡಾ ಎನ್ ಗಾಯತ್ರಿ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬಾನು ಮುಷ್ತಾಕ್‌ರ ಕೊಡುಗೆ, ಸಾಮಾಜಿಕ ಹೋರಾಟದಲ್ಲಿ ಅವರ ಪಾತ್ರ ಮತ್ತು ದಸರಾ ಉದ್ಘಾಟನೆಗೆ ಅವರ ಆಯ್ಕೆಯ ಸಮಂಜಸತೆಯನ್ನು ಈ ಲೇಖಕಿಯರು ತಿಳಿಸಲಿದ್ದಾರೆ.
ಬಾನು ಮುಷ್ತಾಕ್‌ರ ಆಯ್ಕೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯುವ ಕ್ರಮವಾಗಿದೆ. ಇದನ್ನು ವಿರೋಧಿಸುವುದು ಅನಗತ್ಯ ವಿವಾದ ಸೃಷ್ಟಿಸುವ ಯತ್ನವಷ್ಟೇ ಎಂದು ಲೇಖಕಿಯರು ಹೇಳಿದ್ದಾರೆ ಸದ್ಯ ಈ ವಿವಾದದಿಂದ ದಸರಾ ಉದ್ಘಾಟನೆ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಳೆ ನಡೆಯುವ ಲೇಖಕಿಯರ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.
