ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯವು ನಿರೀಕ್ಷೆಗೆ ವಿರುದ್ಧವಾಗಿ ಕಡಿಮೆಯಾಗಿದೆ. ಹಬ್ಬದ ರಜೆಯಿಂದಾಗಿ ವಾಹನ ಸಂಚಾರ ಕಡಿಮೆಯಾಗಿದ್ದು ಮತ್ತು ಮಳೆಯ ಪ್ರಭಾವ ಏರ್‌ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ) ಸುಧಾರಿಸಿದೆ. ಕೆಲವು ಪ್ರದೇಶದಲ್ಲಿ ಶಬ್ದ ಮಾಲಿನ್ಯ ತುಸು ಏರಿಕೆ ಕಂಡುಬಂದಿದೆ.
ಬೆಂಗಳೂರು(ಅ.22): ದೀಪಾವಳಿ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತದೆ ಎನ್ನುವುದು ಈ ಬಾರಿ ನಗರದ ಮಟ್ಟಿಗೆ ಸುಳ್ಳಾಗಿದೆ. ದೀಪಾವಳಿ ಹಬ್ಬದ ಮೊದಲ ದಿನವಾದ ಸೋಮವಾರ ನಗರದ ಮಾಲಿನ್ಯ ಪ್ರಮಾಣವೂ ಸಾಮಾನ್ಯ ದಿನಗಳಿಗಿಂತ ಕಡಿಮೆ ಇತ್ತು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಒದಗಿಸಿರುವ ಡೇಟಾ ಪ್ರಕಾರ, ನಗರದ 9 ಸ್ಥಳಗಳಲ್ಲಿ ಅ.13ರ ಸೋಮವಾರ ಸರಾಸರಿ ವಾಯು ಗುಣಮಟ್ಟ ಪ್ರಮಾಣ 'ಏರ್‌ಕ್ವಾಲಿಟಿ ಇಂಡೆಕ್ಸ್' (ಎಕ್ಯೂಐ)89 ಇದ್ದರೆ, ದೀಪಾವಳಿಯ ಮೊದಲ ದಿನವಾದ ಅ.20ರಂದು ಎಕ್ಯೂಐ 77 ದಾಖಲಾಗಿದೆ.
ನಗರ ರೈಲು ನಿಲ್ದಾಣದಲ್ಲಿ ಅ.13ರಂದು 98 ಇದ್ದರೆ, ಅ.20ರಂದು 104 ಇತ್ತು. ಅದೇ ರೀತಿ ಹೆಬ್ಬಾಳದಲ್ಲಿ ಕ್ರಮವಾಗಿ 84 ಮತ್ತು 74, ನಿಮ್ಹಾನ್ಸ್ ಪ್ರದೇಶದಲ್ಲಿ ಕ್ರಮವಾಗಿ 88 ಮತ್ತು 44, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಕ್ರಮವಾಗಿ ಅ.13ರಂದು 30 116 ಮತ್ತು 73, ಪೀಣ್ಯದಲ್ಲಿ ಅ ಎಕ್ಯೂಐ ಹಾಗೂ ಅ.20ರಂದು 94 ಎಕ್ಯೂಐ ದಾಖಲಾಗಿದೆ. ನಗರದ ಒಂದೆರಡುಪ್ರದೇಶಗಳು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ.
ವಾಹನಗಳ ಕೊಡುಗೆ:
ದೀಪಾವಳಿ ವೇಳೆ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಲು ಕಡಿಮೆ ಸಂಖ್ಯೆಯ ವಾಹನಗಳ ಸಂಚಾರ ಪ್ರಮುಖ ಕಾರಣವಾಗಿದೆ. ಹಬ್ಬಕ್ಕೆ ಬಹುತೇಕ ಜನರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ರಜೆ ಇರುವ ಕಾರಣ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗಿದೆ. ಅದರ ಜೊತೆಗೆ ಮಳೆ ಕೂಡ ಬರುತ್ತಿರುವುದು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಶಬ್ದ ಮಾಲಿನ್ಯ ತುಸು ಏರಿಕೆ:
ಅ.13ಕ್ಕೆ ಹೋಲಿಸಿದರೆ ಅ.20ರಂದು ಶಬ್ದ ಮಾಲಿನ್ಯದಲ್ಲಿ ಅಲ್ಪ ಹೆಚ್ಚಳವಾಗಿದೆ. ನಿರಂತರ ಶಬ್ದ ಮಾಲಿನ್ಯ ಮಾಲಿನ್ಯ ನಿಯಂತ್ರಣ ಕೇಂದ್ರಗಳಲ್ಲಿ ದಾಖಲಾದ ಡೇಟಾ ಪ್ರಕಾರ, ಬಸವೇಶ್ವರ ನಗರದಲ್ಲಿ ಅ.13ರಂದು ಶಬ್ದ 74.7 ಡೆಸಿಬಲ್ ಇದ್ದರೆ, ಅ.20ರಂದು 71.2 ಡೆಸಿಬಲ್ ಇತ್ತು. ದೊಮ್ಮಲೂರಿನಲ್ಲಿ ಕ್ರಮವಾಗಿ 53.7 ಮತ್ತು 57, ಚರ್ಚ್ ಸ್ಟೇಟ್ ಕ್ರಮವಾಗಿ 65.2 ಮತ್ತು 65.9, ಯಶವಂತಪುರ ಪೊಲೀಸ್ ಠಾಣೆ ಬಳಿ ಕ್ರಮವಾಗಿ 62.5 ಡೆಸಿಬಲ್ ಮತ್ತು 69.2 ಡೆಸಿಬಲ್ ಇತ್ತು.
