Subhash Guttedar SIT raid: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ತಮ್ಮ ಮೇಲಿನ ಎಸ್‌ಐಟಿ ದಾಳಿಯ ಹಿಂದೆ ಶಾಸಕ ಬಿಆರ್ ಪಾಟೀಲ್ ಮತ್ತು ರಾಹುಲ್ ಗಾಂಧಿಯವರ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಕಲಬುರಗಿ (ಅ.17): ರಾಹುಲ್ ಗಾಂಧಿ ಮೂಲಕ ಶಾಸಕ ಬಿಆರ್ ಪಾಟೀಲ್ ನನ್ನ ಮೇಲೆ ಆರೋಪ ಹೊರಿಸಿ ಈ ರೀತಿ ಎಸ್‌ಐಟಿಯಿಂದ ದಾಳಿ ಮಾಡಿಸಿದ್ದಾರೆ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಗಂಭೀರ ಆರೋಪ ಮಾಡಿದರು.

ಎಸ್‌ಐಟಿ ದಾಳಿ ನಂತರ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಎಸ್ಐಟಿ ಅಧಿಕಾರಿಗಳು ಇಂದು ಸಹ ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಆದರೆ ನಾವು ಯಾವುದೇ ಮತಗಳ್ಳತನ ಮಾಡಿಲ್ಲ, ಇಂಥದರಲ್ಲಿ ನಾವು ಭಾಗಿಯಾಗಿಲ್ಲ. ನನಗೆ ಆ ವಿಚಾರ ಗೊತ್ತೇ ಇಲ್ಲ. ಆದರೆ ಕ್ಷೇತ್ರಲ್ಲಿ, ರಾಜ್ಯದಲ್ಲಿ ಹಣಕಾಸಿನ ತೊಂದರೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಇದನ್ನು ಮರೆಮಾಚಲು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ದುರುದ್ದೇಶದಿಂದ ನನ್ನ ಮನೆ ಮೇಲೆ ರೈಡ್‌ ಮಾಡಿಸಿದ್ದಾರೆ. ಇಂಥವುಗಳಿಗೆ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡದರು.

ಇದನ್ನೂ ಓದಿ: ರಾಯಚೂರು: ಗಣವೇಷ ಹಾಕಿದ ಪಿಡಿಓಗೆ ಗೇಟ್ ಪಾಸ್! ಪಿಡಿಓ ಪ್ರವೀಣ್ ಕುಮಾರ್ ಅಮಾನತು!

ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟ ಜನರು ಬಿಜೆಪಿ ಸೇರುತ್ತಿದ್ದಾರೆ. ಇದಕ್ಕೆ ಹೆದರಿ ಬಿಆರ್ ಪಾಟೀಲ್ ಈ ರೀತಿ ಕಟ್ಟುಕತೆ ಸೃಷ್ಟಿಸುತ್ತಿದ್ದಾರೆ. ಏನೇ ದಾಳಿ ಮಾಡಲಿ ಯಾವುದೇ ಕಾರಣಕ್ಕೆ ಹೆದರುವುದಿಲ್ಲ ಎಲ್ಲವನ್ನ ಫೇಸ್ ಮಾಡುತ್ತೇನೆ ಎಂದರು.

ನನಗೆ ಗನ್‌ಮ್ಯಾನ್ ಕೊಡದಂತೆ ಸಿಎಂ ನಿರ್ದೇಶನ:

ನನಗೆ ಜೀವ ಬೆದರಿಕೆ ಇದೆ. ರಕ್ಷಣೆಗಾಗಿ ಇದ್ದ ಗನ್‌ಮ್ಯಾನ್ ಕೂಡ ತೆಗೆಯಲಾಗಿದೆ. ಈ ಬಗ್ಗೆ ಕಲ್ಬುರ್ಗಿ ಎಸ್ ಪಿ ಅವರಿಗೆ ಮಾತನಾಡಿ ಕೇಳಿದರೆ ಎಡಿಜಿಪಿ ನಿರ್ದೇಶನ ಇದೆ ಎಂದಿದ್ದಾರೆ. ಎರಡು ಬಾರಿ ಎಡಿಜಿಪಿ ಜೊತೆ ಸಹ ಮಾತನಾಡಿದ್ದೇನೆ. ಆದರೆ ಅವರು ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಗನ್‌ಮ್ಯಾನ್ ಕೊಡಬೇಡಿ ಎಂದು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಜೀವಕ್ಕೆ ಬೆಲೆ ಇಲ್ವ? ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ. ಇದರ ಹಿಂದೆ ಯಾವ ಷಡ್ಯಂತ್ರ ಇದೆಯೋ ಗೊತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು