ಮಂಗಳೂರಿನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ದಿನವಿಡೀ ಯಾವುದೇ ಸೌಲಭ್ಯವಿಲ್ಲದೆ ಕಾದು ಕುಳಿತ ನೂರಾರು ಪ್ರಯಾಣಿಕರು, ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗ್ಗೆ 8.50 ಕ್ಕೆ ಹಾರಾಟ ಆರಂಭಿಸಬೇಕಿದ್ದ ಈ ವಿಮಾನವನ್ನು ಮೊದಲು ತಾಂತ್ರಿಕ ತೊಂದರೆ ಉಲ್ಲೇಖಿಸಿ ಸಿಬ್ಬಂದಿ ತಡಮಾಡಿದರು. ಆರಂಭದಲ್ಲಿ ಒಂದು ಗಂಟೆ ತಡವಾಗಿ ಹೊರಡುತ್ತದೆ ಎಂದು ಹೇಳಿದ ಸಿಬ್ಬಂದಿ, ಬಳಿಕ ಮಧ್ಯಾಹ್ನ 3.30ಕ್ಕೆ ವಿಮಾನ ಹಾರುತ್ತದೆಂದು ಭರವಸೆ ನೀಡಿದರು. ಆದರೆ ಆ ಸಮಯದಲ್ಲಿ ಸಹ ವಿಮಾನ ಹೊರಡದೆ, 4.30ಕ್ಕೆ ಹೊರಡಿಸಲಾಗುತ್ತದೆ ಎಂದು ಮತ್ತೊಮ್ಮೆ ಮಾಹಿತಿ ನೀಡಲಾಯಿತು.
ಸಂಜೆ 6 ಗಂಟೆಯ ಹೊತ್ತಿಗೆ ವಿಮಾನ ಹೊರಡುತ್ತದೆ ಎಂಬ ಅಂತಿಮ ಭರವಸೆ ನೀಡಿದರೂ, ಕೊನೆಗೂ ವಿಮಾನಯಾನ ಸಂಪೂರ್ಣವಾಗಿ ರದ್ದುಗೊಂಡಿತು. ಇದರಿಂದ ಬೆಳಗ್ಗಿನಿಂದ ಸಂಜೆವರೆಗೆ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಪ್ರಯಾಣಿಕರ ಕೋಪ ಅತಿರೇಕಕ್ಕೇರಿತು.
ಪ್ರಯಾಣಿಕರ ಆಕ್ರೋಶ
ಪ್ರಯಾಣಿಕರಿಗೆ ಯಾವುದೇ ರೀತಿಯ ಸೌಲಭ್ಯ, ಆಹಾರ, ಅಥವಾ ವಸತಿ ವ್ಯವಸ್ಥೆ ನೀಡದೆ, ದಿನವಿಡೀ ಕಾದು ಕುಳ್ಳಿರಿಸಿದ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಹೆಚ್ಚಿನ ಮೊತ್ತ ಪಾವತಿಸಿ ಹಗಲಿನ ಹಾರಾಟಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದ ಹಲವರು ಕೊನೆಯಲ್ಲಿ ರಾತ್ರಿ ವೇಳೆ ಬರುವ ಬೇರೆ ವಿಮಾನದಲ್ಲಿ ಕಳುಹಿಸಲಾಗುವುದು ಎಂಬ ಮಾಹಿತಿಯನ್ನು ಸಿಬ್ಬಂದಿಯಿಂದ ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾವು ಹಗಲಿನ ಪ್ರಯಾಣಕ್ಕಾಗಿ ಹೆಚ್ಚುವರಿ ಹಣ ಕಟ್ಟಿದ್ದೇವೆ. ಆದರೂ ಮತ್ತೆ ರಾತ್ರಿ ಪ್ರಯಾಣಕ್ಕೆ ಒತ್ತಾಯ ಮಾಡುತ್ತಿರುವುದು ಪ್ರಯಾಣಿಕರ ಹಕ್ಕಿನ ದೌರ್ಜನ್ಯವೇ ಸರಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ವ್ಯವಸ್ಥೆಯ ಗೊಂದಲ
ಸಿಬ್ಬಂದಿ ಬಹರೈನ್‌ನಿಂದ ಬರುವ ಬೇರೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸುವುದಾಗಿ ಹೇಳಿದರೂ, ಅದಕ್ಕೂ ಯಾವುದೇ ಸ್ಪಷ್ಟತೆ ಕೊಡಲಿಲ್ಲ. ಇದರ ಪರಿಣಾಮವಾಗಿ, ಮಕ್ಕಳು ಹಾಗೂ ಹಿರಿಯ ನಾಗರಿಕರೊಂದಿಗೆ ಪ್ರಯಾಣಿಸುತ್ತಿದ್ದವರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿಯ ನಿರ್ಲಕ್ಷ್ಯ?
ಪ್ರಯಾಣಿಕರ ಪ್ರಕಾರ, ಸಮಸ್ಯೆ ಉಂಟಾದಾಗಲೇ ಸೂಕ್ತ ಮಾಹಿತಿ ನೀಡದೆ, ಪ್ರತಿ ಹೊತ್ತಿಗೂ ಹೊಸ ಸಮಯದ ಭರವಸೆ ನೀಡಿ ಕೊನೆಯಲ್ಲಿ ವಿಮಾನವನ್ನು ರದ್ದುಗೊಳಿಸಿರುವುದು ಸಿಬ್ಬಂದಿಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. “ತಾಂತ್ರಿಕ ದೋಷ ಉಂಟಾದರೆ ನಾವು ಸಹಾನುಭೂತಿ ವಹಿಸುತ್ತೇವೆ. ಆದರೆ ಸಮಯಕ್ಕೆ ಸರಿಯಾದ ಮಾಹಿತಿ, ಕನಿಷ್ಠ ಆಹಾರ-ನೀರು ಸೌಲಭ್ಯವನ್ನಾದರೂ ನೀಡಬೇಕಲ್ಲವೇ?” ಎಂದು ಹಲವರು ಪ್ರಶ್ನಿಸಿದ್ದಾರೆ.
ಪ್ರಯಾಣಿಕರಿಗೆ ಪರಿಹಾರ ಸಿಗುತ್ತದೆಯೇ?
ವಿಮಾನ ರದ್ದುಪಡಿಸಿದ ಪರಿಣಾಮ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಟಿಕೆಟ್ ಹಣ ಹಿಂತಿರುಗಿಸುವುದೇ ಅಥವಾ ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡುವುದೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ನೀಡಿಲ್ಲ. ಈ ಘಟನೆ ಪ್ರಯಾಣಿಕರ ನಡುವೆ “ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ನಿರ್ವಹಣಾ ಗುಣಮಟ್ಟ ಎಲ್ಲಿ ಹೋಗುತ್ತಿದೆ?” ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
