ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಬೈಕ್‌ ಸವಾರನೋರ್ವ ಹೆಲ್ಮೆಟ್‌ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಏಳೂವರೆ ಲಕ್ಷ ರು. ಕಡಿತಗೊಳಿಸಿ ಹೈಕೋರ್ಟ್‌ ಆದೇಶಿಸಿದೆ. ಹೆಲ್ಮೆಟ್‌ ಧರಿಸದೆ ಇರುವುದು ಬೈಕ್‌ ಸವಾರನ ನಿರ್ಲಕ್ಷ್ಯವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌

ಬೆಂಗಳೂರು : ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಬೈಕ್‌ ಸವಾರನೋರ್ವ ಹೆಲ್ಮೆಟ್‌ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಏಳೂವರೆ ಲಕ್ಷ ರು. ಕಡಿತಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

ಹೆಲ್ಮೆಟ್‌ ಧರಿಸದೆ ಇರುವುದು ಬೈಕ್‌ ಸವಾರನ ನಿರ್ಲಕ್ಷ್ಯವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ನಿಗದಿಪಡಿಸಿದ ಒಟ್ಟು 19,64,400 ರು. ಪರಿಹಾರದಲ್ಲಿ ನಿರ್ಲಕ್ಷ್ಯದ ಭಾಗವಾಗಿ ಶೇ.40ರಷ್ಟು ಹಣ ಅಂದರೆ 7,85,760 ರು. ಕಡಿತಗೊಳಿಸಿದೆ.

ಅಪಘಾತದಿಂದಾಗಿ 2019ರಲ್ಲಿ ಮೃತಪಟ್ಟ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದ ನಿವಾಸಿ ಅವಿನಾಶ್‌ನ (23) ಕುಟುಂಬದವರಿಗೆ ಒಟ್ಟು 18,03,000 ರು. ಪರಿಹಾರ ನಿಗದಿಪಡಿಸಿ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ (ಎಂಎಟಿಸಿ) ಆದೇಶಿಸಿತ್ತು. ಈ ಪರಿಹಾರ ಪ್ರಮಾಣ ಹೆಚ್ಚಿದೆ ಎಂದು ಆಕ್ಷೇಪಿಸಿ ಅಘಾತಕ್ಕೆ ಕಾರಣವಾಗಿದ್ದ ಟ್ರ್ಯಾಕ್ಟರ್‌ವೊಂದಕ್ಕೆ ವಿಮಾ ಪಾಲಿಸಿ ನೀಡಿದ್ದ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು

ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಅವರ ನೇತೃತ್ವದ ವಿಭಾಗೀಯ ಪೀಠ, ಪರಿಹಾರ ಮೊತ್ತ ಕಡಿತಗೊಳಿಸಿ ಆದೇಶಿಸಿದೆ

ಪ್ರಕರಣದಲ್ಲಿ ಅಪಘಾತ ಸಂಭವಿಸಿದ ವೇಳೆ ದ್ವಿಚಕ್ರ ಸವಾರನಾಗಿದ್ದ ಮೃತ ಅವಿನಾಶ್‌ ಹೆಲ್ಮೆಟ್‌ ಧರಿಸಿರಲಿಲ್ಲ. ದಾಖಲೆಗಳ ಪ್ರಕಾರ, ಬೈಕ್‌ನಲ್ಲಿ ಅವಿನಾಶ್ ವೇಗದಿಂದ ಮತ್ತು ನಿರ್ಲಕ್ಷ್ಯದಿಂದ ಬಂದು ಟ್ರೈಲರ್‌ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅಪಘಾತದಲ್ಲಿ ಆತನ ನಿರ್ಲಕ್ಷ್ಯ ಪ್ರಮಾಣವು ಶೇ.40ರಷ್ಟಿದೆ. ಟ್ರಾಕ್ಟರ್‌ ಚಾಲಕನ ನಿರ್ಲಕ್ಷ್ಯ ಶೇ.60ರಷ್ಟಿದೆ ಎಂಬುದಾಗಿ ಪೀಠ ತೀರ್ಮಾನಿಸಿತು.

ಅಲ್ಲದೆ, ಮೃತಪಟ್ಟಾಗ ಅವಿನಾಶ್‌ ವಯಸ್ಸು, ಪಡೆಯುತ್ತಿದ್ದ ಸಂಬಳ, ಅವರ ಕುಟುಂಬದವರು ಅನುಭವಿಸಿದ ಅವಲಂಬನೆ ನಷ್ಟ/ನೋವು, ಅಂತ್ಯಕ್ರಿಯೆ ಖರ್ಚು ಮತ್ತು ಆತ ಭವಿಷ್ಯದಲ್ಲಿ ಗಳಿಸಬಹುದಾಗಿದ್ದ ಸಂಭಾವ್ಯ ಆದಾಯವನ್ನು ಲೆಕ್ಕಹಾಕಿದ ಪೀಠವು ಒಟ್ಟು 19,64,400 ರು. ಪರಿಹಾರ ಪಡೆಯಲು ಅನಿನಾಶ್ ಕುಟುಂಬದವರು ಅರ್ಹರಾಗಿದ್ದಾರೆ. ಆದರೆ, ಅಪಘಾತ ನಡೆದಾಗ ಮೃತ ಹೆಲ್ಮೆಟ್‌ ಧರಿಸದ್ದಕ್ಕೆ ಶೇ.40ರಷ್ಟು ಅಂದರೆ ಒಟ್ಟು 7,85,760 ರು. ಅನ್ನು ನಿರ್ಲಕ್ಷ್ಯದ ಭಾಗವಾಗಿ ನಿಗದಿಯಾದ ಪರಿಹಾರ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿತು. ಜೊತೆಗೆ, ಉಳಿದ 11,78,640 ರು. ಅನ್ನು ಶೇ.6ರಷ್ಟು ವಾರ್ಷಿಕ ಬಡ್ಡಿದರದೊಂದಿಗೆ ಆರು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

ಪ್ರಕರಣವೇನು?:

ಯುವಕ ಅವಿನಾಶ್‌ ರಾತ್ರಿ 8.50 ಸಮಯದಲ್ಲಿ ಹೊಳಲ್ಕೆರೆ ತಾಲೂಕಿನ ಹಿರೇಗುಂಟನೂರು ಗ್ರಾಮದಿಂದ ಅಡನೂರು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ. ಚಿಕ್ಕಜಾಜೂರು ಗ್ರಾಮದ ಬಳಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್‌ ಮತ್ತು ಟ್ರೈಲರ್‌ ಅನ್ನು ಚಾಲಕ ಯಾವುದೇ ಮುನ್ಸೂಚನೆ ನೀಡದೆ ದಿಢೀರ್‌ ಬ್ರೇಕ್‌ ಹಾಕಿ ನಿಲ್ಲಿಸಿದ್ದ. ಇದರಿಂದ ಟ್ರೈಲರ್‌ ಹಿಂಬದಿಗೆ ಅವಿನಾಶ್‌ ಬೈಕ್‌ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್‌, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದ. ಪರಿಹಾರಿ ಕೋರಿ ಮೃತನ ತಂದೆ ಬಸರಾಜಪ್ಪ, ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ್ದ ಹೊಳಲ್ಕೆರೆಯ ಎಂಎಸಿಟಿ (ನ್ಯಾಯಾಧಿಕರಣ) ಮೃತ ಅವಿನಾಶ್‌ ಕುಟುಂಬದವರಿಗೆ ಶೇ.6ರಷ್ಟು ವಾರ್ಷಿಕ ಬಡ್ಡಿದರದಲ್ಲಿ ಒಟ್ಟು 18,03,000 ರು. ಪರಿಹಾರ ಪಾವತಿಸುವಂತೆ ಟ್ರ್ಯಾಕ್ಟರ್‌ಗೆ ವಿಮಾ ಪಾಲಿಸಿ ಒದಗಿಸಿದ್ದ ವಿಮಾ ಕಂಪನಿಗೆ ನಿರ್ದೇಶಿಸಿ 2019ರ ಡಿ.5ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ 2021ರಲ್ಲಿ ನ್ಯಾಷನಲ್‌ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೇ ವೇಳೆ ಪರಿಹಾರ ಪ್ರಮಾಣ ಕಡಿಮೆಯಾಗಿದೆ ಎಂದು ಆಕ್ಷೇಪಿಸಿ ಅವಿನಾಶ್‌ ತಾಯಿ ಹೈಕೋರ್ಟ್‌ಗೆ ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.