Pune-Bangalore highway accident: ಧಾರವಾಡ ತಾಲೂಕಿನ ಹೊಸ ತೇಗೂರು ಬಳಿ, ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಪಡೆದು ಮರಳುತ್ತಿದ್ದ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ನಿದ್ದೆ ಮಂಪರಿನಿಂದಾದ ಈ ದುರ್ಘಟನೆಯಲ್ಲಿ ಗದಗ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ಧಾರವಾಡ (ಅ.13): ಮರಕ್ಕೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ತಾಲೂಕಿನ ಹೊಸ ತೇಗೂರು ಗ್ರಾಮದ ಬಳಿ ಪೂನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಸಂಭವಿಸಿದೆ.
ಗದಗ ಮುಲದ ಸುರೇಶ ಬಸವಣ್ಣೆಪ್ಪ ತುಪ್ಪದ (65) ಮತ್ತು ಮಹಾಂತಮ್ಮ ಬಸವಣ್ಣೆಪ್ಪ ತುಪ್ಪದ (೫೨) ಸಾವನ್ನಪ್ಪಿದ್ದು, ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ಗೀತಾ ಸಿದ್ಧರಾಮ ಅಸುಂಡಿ, ಜನನಿ ಸುರೇಶ ತುಪ್ಪ, ಕೀರ್ತಿ ಸುರೇಶ ತುಪ್ಪದ, ವಿರಾಜ ಸಿದ್ಧಲಿಂಗಪ್ಪ ತುಪ್ಪದ ಮತ್ತು ಕ್ರೂಸರ್ ಚಾಲಕ ಚೇತನ ಜಾಧವ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಮೂಲದ ಇವರು ಕೊಲ್ಲಾಪೂರ ಮಹಾಲಕ್ಷ್ಮಿ ದರ್ಶನ ಪಡೆದು ಮರಳಿ ಬರುವಾಗ ಈ ಅವಘಡ ನಡೆದಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಡಿಎಸ್‌ಪಿ ವಿನೋದ ಮುಕ್ತೇದಾರ, ಸಿಪಿಐ ಶಮೀರ ಮುಲ್ಲಾ ಭೇಟಿ ನೀಡಿದ್ದರು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಸಿದ್ದರಾಮಪ್ಪ ಉನ್ನದ ಮತ್ತು ಸಿಬ್ಬಂದಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
