ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 79ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿಷ್ಠ ಭಾರತ ನಿರ್ಮಾಣದ ಪ್ರತಿಜ್ಞೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು,  ಕುರಿತು ಭಾಷಣ ಮಾಡಿದರು.

ಬೆಂಗಳೂರ (ಆ.15): 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಭವನದ ಅಂಗಳದಲ್ಲಿ ಶುಕ್ರವಾರ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದ ಅಂಗಳದಲ್ಲಿರುವ ಮಹಾತ್ಮಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದಿಂದ ಗೌರವ ರಕ್ಷೆ ನೀಡಲಾಯಿತು.

ತದ ನಂತರ ರಾಜಭವನದ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿ, ಈ ದಿನದಂದು ನಾವು ಭವ್ಯ ಮತ್ತು ಸಮೃದ್ಧ ಭಾರತವನ್ನು ರೂಪಿಸಲು, ತಾಯ್ನಾಡಿಗೆ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.

ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿ ಸಂದೇಶ ನೀಡಿದ ಗೌರವಾನ್ವಿತ ರಾಜ್ಯಪಾಲರು, "ಈ ದಿನವು ನಮ್ಮ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾನ್ ವೀರರ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥತೆಯನ್ನು ನೆನಪಿಸುತ್ತದೆ. ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತೇವೆ, ಪರಿಸರವನ್ನು ರಕ್ಷಿಸುತ್ತೇವೆ, ಡಿಜಿಟಲ್ ಮತ್ತು ಹಸಿರು ಆರ್ಥಿಕತೆಯತ್ತ ಸಾಗುತ್ತೇವೆ ಮತ್ತು ಮುಂಬರುವ ಪೀಳಿಗೆಗೆ ಬಲವಾದ, ಸಮೃದ್ಧ ಮತ್ತು ಸುರಕ್ಷಿತ ಕರ್ನಾಟಕ ಮತ್ತು ಭಾರತವನ್ನು ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ" ಎಂದರು.

"ಸ್ವತಂತ್ರ ಭಾರತದ 78 ವರ್ಷಗಳ ಅಭಿವೃದ್ಧಿ ಪ್ರಯಾಣವು ಅನೇಕ ಸಾಧನೆಗಳು ಮತ್ತು ಸವಾಲುಗಳಿಂದ ತುಂಬಿದೆ. ಕೃಷಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ ಮೌಲ್ಯಗಳು, ನಾಗರಿಕರ ಭಾಗವಹಿಸುವಿಕೆ ಮತ್ತು ಏಕತೆಯ ಬಲದಿಂದ ಇದೆಲ್ಲವೂ ಸಾಧ್ಯವಾಗಿದೆ. ಈ ರಾಷ್ಟ್ರೀಯ ಅಭಿವೃದ್ಧಿ ಪ್ರಯಾಣದಲ್ಲಿ ಕರ್ನಾಟಕ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕವು ತನ್ನ ಶ್ರೀಮಂತ ಸಂಸ್ಕೃತಿ, ಜ್ಞಾನ ಸಂಪ್ರದಾಯ, ನಾವೀನ್ಯತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮನೋಭಾವಕ್ಕೆ ದೇಶಾದ್ಯಂತ ಹೆಸರುವಾಸಿಯಾಗಿದೆ. ರಾಜ್ಯದ ವಿಜ್ಞಾನಿಗಳು, ರೈತರು, ಶಿಕ್ಷಕರು, ಉದ್ಯಮಿಗಳು, ಕಲಾವಿದರು ಮತ್ತು ಯುವಕರು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ" ಎಂದು ಶ್ಲಾಘಿಸಿದರು.

"ಕರ್ನಾಟಕ ಸರ್ಕಾರವು ಬಡತನವನ್ನು ನಿರ್ಮೂಲನೆ ಮಾಡಲು, ಮಹಿಳೆಯರನ್ನು ಸಬಲೀಕರಣಗೊಳಿಸಲು, ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು, ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಮತ್ತು ಹಲವಾರು ಕಲ್ಯಾಣ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಈ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಆರೋಗ್ಯ, ಅಕ್ಷರ ಆವಿಷ್ಕಾರ, ಯುವ ನಿಧಿ ಯೋಜನೆ ಮುಂತಾದ ಪ್ರಮುಖ ಯೋಜನೆಗಳು ಸೇರಿವೆ, ಇದರ ಜೊತೆಗೆ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ" ಎಂದು ಹೇಳಿದರು.

"ಕರ್ನಾಟಕ ಕ್ವಾಂಟಮ್ ಮಿಷನ್ ಮೂಲಕ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೆಲಸ ಮಾಡಲಾಗುತ್ತಿದೆ, ಈ ಮಿಷನ್ ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. "ಹರ್ ಘರ್ ತಿರಂಗ" ಅಭಿಯಾನವು ನಮ್ಮ ರಾಷ್ಟ್ರೀಯ ಹೆಮ್ಮೆ, ಏಕತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ. ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ರಾಷ್ಟ್ರದ ಬಗ್ಗೆ ಗೌರವ ಮತ್ತು ಜವಾಬ್ದಾರಿಯ ಭಾವನೆಯನ್ನು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಬನ್ನಿ, ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸೋಣ ಮತ್ತು ದೇಶಭಕ್ತಿಯನ್ನು ಮತ್ತಷ್ಟು ಬಲಪಡಿಸೋಣ" ಎಂದು ಕರೆ ನೀಡಿದರು.

"ಕರ್ನಾಟಕ ಮತ್ತು ಭಾರತ ಎರಡೂ ಜಾಗತಿಕ ಮಟ್ಟದಲ್ಲಿ ನಾಯಕರಾಗಲು ಸಾಧ್ಯವಾಗುವಂತೆ ರಾಜ್ಯದ ಯುವಕರು ಜ್ಞಾನ, ಕೌಶಲ್ಯ ಮತ್ತು ನಾವೀನ್ಯತೆಯ ದಿಕ್ಕಿನಲ್ಲಿ ಮುಂದುವರಿಯಬೇಕೆಂದು. ಅದೇ ಸಮಯದಲ್ಲಿ, ಮುಂಬರುವ ಪೀಳಿಗೆಗೆ ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಸ್ವಚ್ಛತೆ ಮತ್ತು ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆಗೆ ನಾವು ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದು ಕರೆ ನೀಡಿದ ರಾಜ್ಯಪಾಲರು, "ಕರ್ನಾಟಕದ ಎಲ್ಲಾ ನಾಗರಿಕರಿಗೆ ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ" ಶುಭ ಹಾರೈಸಿದರು.