ಕೆಪಿಎಸ್‌ಸಿ ಕೃಷಿ ಇಲಾಖೆಯ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿ ಅಳವಡಿಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ಅಧಿಸೂಚನೆಗಾಗಿ ಅಭ್ಯರ್ಥಿಗಳು ಕಾಯಬೇಕಿದೆ.
ಬೆಂಗಳೂರು (ಸೆ.05): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಸೆ.6-7 ಹಾಗೂ ಅ.4ರಂದು ನಿಗದಿಪಡಿಸಿದ್ದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯ ಅನ್ವಯ, ಪರಿಶಿಷ್ಟಜಾತಿ ಒಳಮೀಸಲಾತಿಯನ್ನು ಅಳವಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ ಪಿಎಸ್‌ಸಿ 1 ಆರ್‌ಟಿಬಿ-4/2024 ದಿನಾಂಕ 20-09-2024 ಮತ್ತು ತಿದ್ದುಪಡಿ ಅಧಿಸೂಚನೆ ದಿನಾಂಕ 31-12-2024ರನ್ವಯ ಹೈದರಾಬಾದ್-ಕರ್ನಾಟಕ (ಹೈ.ಕ) ವೃಂದದಡಿ ಕೃಷಿ ಇಲಾಖೆಯಲ್ಲಿನ 42 ಕೃಷಿ ಅಧಿಕಾರಿ ಹಾಗೂ 231 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ಹುದ್ದೆಗಳಿಗೆ ಸೆಪ್ಟೆಂಬರ್ 6, 2025ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸೆಪ್ಟೆಂಬರ್ 7 ಹಾಗೂ ಅಕ್ಟೋಬರ್ 4, 2025ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾಗಿತ್ತು.
ಆದರೆ, ಸೆಪ್ಟೆಂಬರ್ 4, 2025ರಂದು ಹೊರಡಿಸಿದ ಸುತ್ತೋಲೆ ಸಂಖ್ಯೆ: ಸಿಆಸುಇ 388 ಸೆನೆನಿ 2024 ಭಾ-3 ರನ್ವಯ, ಅಕ್ಟೋಬರ್ 28, 2024ರ ನಂತರ ಯಾವುದೇ ತಿದ್ದುಪಡಿ ಅಧಿಸೂಚನೆಗಳನ್ನು ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ರದ್ದುಪಡಿಸಿ, ಪರಿಶಿಷ್ಟಜಾತಿ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮೇಲೆ ತಿಳಿಸಿದ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಅರ್ಜಿದಾರರು ಮುಂದಿನ ದಿನಗಳಲ್ಲಿ ಹೊಸ ನೇಮಕಾತಿ ಅಧಿಸೂಚನೆಗಾಗಿ ಕಾಯಬೇಕಾಗಿದೆ. ಈ ನಿರ್ಧಾರದಿಂದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದೆ.
