ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ತಂಡವು ತಮಿಳ್ ತಲೈವಾಸ್ ವಿರುದ್ಧ 36-33 ಅಂಕಗಳ ಜಯ ಸಾಧಿಸಿದೆ. ಅಜಿತ್ ಚೌಹಾಣ್ ಮತ್ತು ಅನಿಲ್ ಮೋಹನ್ ಅವರ ಅಮೋಘ ಆಟದಿಂದ ಮುಂಬಾ ಗೆಲುವು ಸಾಧ್ಯವಾಯಿತು. ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ 54-44 ಅಂಕಗಳಿಂದ ಗೆಲುವು ಸಾಧಿಸಿತು.

ವಿಶಾಖಪಟ್ಟಣಂ: 12ನೇ ಆವೃತ್ತಿಯಲ್ಲಿ ಯು ಮುಂಬಾ ಸತತ 2ನೇ ಗೆಲುವು ದಾಖಲಿಸಿದೆ. ಭಾನುವಾರ ತಮಿಳ್‌ ತಲೈವಾಸ್‌ ವಿರುದ್ಧ 36-33 ಅಂಕಗಳಿಂದ ಗೆದ್ದ ಮುಂಬಾ, ಅಂಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲಾರ್ಧದಲ್ಲಿ 11-14 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ ಮುಂಬಾ, ಒಂದು ಹಂತದಲ್ಲಿ 9 ಅಂಕಗಳಿಂದ ಹಿನ್ನಡೆಯಲ್ಲಿತ್ತು. ಆದರೆ ಹೋರಾಟ ಬಿಡದೆ ಕೊನೆಯಲ್ಲಿ ಸತತ ಅಂಕ ಗಳಿಸಿ, 3 ಅಂಕಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಅಜಿತ್‌ ಚೌಹಾಣ್‌ 9, ಅನಿಲ್‌ ಮೋಹನ್‌ 8 ಅಂಕ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಲೈವಾಸ್‌ ಪರ ಅರ್ಜುನ್ ದೇಶ್ವಾಲ್‌ 12, ಪವನ್‌ ಶೆರಾವತ್‌ 7 ಅಂಕ ಗಳಿಸಿದರು.

ಹರ್ಯಾಣಕ್ಕೆ ಸೋಲು: ದಿನದ 2ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ 54-44 ಅಂಕಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ದೇವಾಂಕ್‌ 21, ಮನ್‌ಪ್ರೀತ್‌ 13 ಅಂಕ ಗಳಿಸಿ ಬೆಂಗಾಲ್‌ ಗೆಲುವಿನ ರೂವಾರಿಗಳು ಎನಿಸಿಕೊಂಡರು. ಹರ್ಯಾಣದ ಶಿವಂ ಪಟರೆ(17 ಅಂಕ), ವಿನಯ್‌(13 ಅಂಕ) ಹೋರಾಟ ವ್ಯರ್ಥವಾಯಿತು.

ಪ್ರೊ ಕಬಡ್ಡಿ ಲೀಗ್ ಎರಡನೇ ದಿನದಾಟದಂತ್ಯದ ವೇಳೆಗೆ ಯು ಮುಂಬಾ ತಂಡವು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರೇ, ಬೆಂಗಾಲ್ ವಾರಿಯರ್ಸ್‌ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಯುಪಿ ಯೋದಾಸ್, ಪುಣೇರಿ ಪಲ್ಟಾನ್, ತಮಿಳ್ ತಲೈವಾಸ್ ತಂಡಗಳು ಕೂಡಾ ತಲಾ ಎರಡು ಅಂಕಗಳು ಪಡೆದು ಕ್ರಮವಾಗಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿವೆ.

Scroll to load tweet…

ಇಂದಿನ ಪಂದ್ಯಗಳು

ಪಾಟ್ನಾ ಪೈರೇಟ್ಸ್‌-ಯುಪಿ ಯೋಧಾಸ್‌, ರಾತ್ರಿ 8ಕ್ಕೆ

ಪುಣೇರಿ ಪಲ್ಟನ್-ಗುಜರಾತ್‌ ಜೈಂಟ್ಸ್‌, ರಾತ್ರಿ 9ಕ್ಕೆ

ಹಾಕಿ ಏಷ್ಯಾಕಪ್‌: ಸೂಪರ್‌-4 ಹಂತಕ್ಕೆ ಪ್ರವೇಶಿಸಿದ ಭಾರತ

ರಾಜ್‌ಗಿರ್‌: ಪುರುಷರ ಹಾಕಿ ಏಷ್ಯಾಕಪ್‌ನಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿ, ಸೂಪರ್‌-4 ಹಂತ ಪ್ರವೇಶಿಸಿದೆ. ಆರಂಭಿಕ ಪಂದ್ಯದಲ್ಲಿ ಚೀನಾವನ್ನು ಮಣಿಸಿದ್ದ ಭಾರತ, ಭಾನುವಾರ ಜಪಾನ್‌ ವಿರುದ್ಧ 3-2 ಗೋಲುಗಳಿಂದ ಜಯಗಳಿಸಿತು.

ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ದಾಖಲಿಸಿದ್ದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಅವರು 2 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಮತ್ತೊಂದು ಗೋಲನ್ನು ಮಂದೀಪ್‌ ಸಿಂಗ್‌ ದಾಖಲಿಸಿದರು. ಈ ಗೆಲುವಿನೊಂದಿಗೆ ಭಾರತ ‘ಎ’ ಗುಂಪಿನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಸೂಪರ್‌-4 ಸ್ಥಾನ ಖಚಿತಪಡಿಸಿಕೊಂಡಿದೆ. ತಂಡ ಸೋಮವಾರ ಕಜಕಸ್ತಾನ ವಿರುದ್ಧ ಸೆಣಸಾಡಲಿದೆ.

ನೇಷನ್ಸ್‌ ಕಪ್‌ ಫುಟ್ಬಾಲ್‌: ಇಂದು ಭಾರತ vs ಇರಾನ್‌

ಹಿಸೋರ್‌(ತಜಿಕಿಸ್ತಾನ): ಸಿಎಎಫ್‌ಎ ನೇಷನ್ಸ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಸೋಮವಾರ ಬಲಿಷ್ಠ ಇರಾನ್‌ ವಿರುದ್ಧ ಸೆಣಸಾಡಲಿದೆ. ಮೊದಲ ಪಂದ್ಯದಲ್ಲಿ ಭಾರತ ತಜಿಕಿಸ್ತಾನ ವಿರುದ್ಧ 2-1 ಗೋಲುಗಳಿಂದ ಗೆದ್ದಿತ್ತು. ಈ ಮೂಲಕ ನೂತನ ಕೋಚ್‌ ಖಾಲಿದ್‌ ಜಮೀಲ್‌ರ ಮೊದಲ ಪಂದ್ಯದಲ್ಲೇ ಭಾರತ ಯಶಸ್ಸು ಸಾಧಿಸಿತ್ತು. ಆದರೆ ತಂಡದ ಪ್ರದರ್ಶನ ಇನ್ನಷ್ಟು ಸುಧಾರಿಸಿಕೊಳ್ಳಬೇಕಿದೆ. ಅಲ್ಲದೆ, ಇರಾನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿದ್ದರೆ, ಭಾರತ 133ನೇ ಸ್ಥಾನದಲ್ಲಿದೆ. ಹೀಗಾಗಿ ಇರಾನ್‌ ವಿರುದ್ಧ ಗೆಲ್ಲಲು ಭಾರತ ಅಸಾಧಾರಣ ಪ್ರದರ್ಶನ ತೋರಬೇಕಿದೆ.