ನಮ್ಮ ಕುಟುಂಬದ ಮೇಲೆ ಯಾರು ಏನೇ ಮಾತನಾಡಿದರು ಅವರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದ್ರು ಅಂಥ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಎಚ್ಚರಿಕೆ ಕೊಟ್ಟರು.
ಮೈಸೂರು (ಸೆ.18): ನಮ್ಮ ಕುಟುಂಬದ ಬಗ್ಗೆ ಯಾರಾದ್ರು ಏನಾದ್ರು ಇಲ್ಲದಿರುವುದನ್ನ ಹೇಳಿದ್ರೆ ನಂಬಬೇಡಿ. ಏನಾದ್ರು ಮಾತನಾಡಿದ್ರೆ ನಮ್ಮ ಮನಸ್ಸಿಗೆ ಕಷ್ಟ ಆಗುತ್ತೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು. ನಟ ಡಾ. ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಅಂಗವಾಗಿ ಉದ್ಭೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕಕ್ಕೆ ಆಗಮಿಸಿದ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ನಮ್ಮ ಕುಟುಂಬದ ಮೇಲೆ ಯಾರು ಏನೇ ಮಾತನಾಡಿದರು ಅವರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದ್ರು ಅಂಥ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದರು.
ನಮ್ಮ ಮನೆಗೆ ಬಂದು ಏನೇ ಇದ್ರು ಮಾತಮಾಡಿ ಸರಿಪಡಿಸಿಕೊಳ್ಳಿ. ನಿಮ್ಮ ಸಂತೋಷದಿಂದ ನನಗೆ ಬಹಳಷ್ಟು ಖುಷಿಯಾಗಿದೆ. ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಳ್ಳೆಯ ಕೆಲಸಗಳನ್ನ ಮಾಡಿ. ನಮ್ಮ ಅಭಿಮಾನಿಗಳು ಬುದ್ದಿವಂತರು ಹಾಗೂ ವಿದ್ಯಾವಂತರು. ನಿಮ್ಮ ಪ್ರೀತಿ ಹೀಗೆ ಇರಲಿ. ನಮ್ಮ ಯಜಮಾನರ ಮೊಮ್ಮಗ ಜೇಷ್ಟವರ್ಧನ್ ಬಂದಿದ್ದಾನೆ. ಅವನಿಗೆ ನಿಮ್ಮ ಪ್ರೀತಿ ಇರಲಿ ಎಂದರಲ್ಲದೇ. ಕರ್ನಾಟಕ ಸರ್ಕಾರ ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಟ್ಟಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಸಂತೋಷವೇ ನಮ್ಮ ಸಂತೋಷ. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದು ತಿಳಿಸಿದರು.
ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ವಿಚಾರವಾಗಿ, ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಕರ್ನಾಟಕ ರತ್ನ ಬಂದಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅಭಿಮಾನಿಗಳು ನಮ್ಮ ಜೊತೆಯಲ್ಲಿರಬೇಕು. 10 ಗುಂಟೆ ಜಾಗಕ್ಕೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಅಲ್ಲಿದ ಮಂಟಪವನ್ನ ಭಾರತಿಯವರೇ ನಿರ್ಮಾಣ ಮಾಡಿದ್ರು. ಮೈಸೂರಿನಲ್ಲಿ ಉತ್ತಮವಾದ ಸ್ಮಾರಕ ನಿರ್ಮಾಣವಾಗಿದೆ. ಇತ್ತೀಚೆಗೆ ಮಂಟಪ ತೆರೆವು ಮಾಡಲಾಗಿದೆ. ಬಾಲಣ್ಣ ಕುಟುಂಬಕ್ಕು ಮನವಿ ಮಾಡಿದ್ದೇವೆ. ಸರ್ಕಾರ ಜಾಗವನ್ನ ವಶಪಡಿಸಿಕೊಂಡಿದೆ. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮೈಸೂರಿನಲ್ಲಿ ಸರ್ಕಾರ 16 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. ಸರ್ಕಾರ 10 ಗುಂಟೆ ಜಾಗ ಕೊಟ್ಟರೆ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.
ಎಚ್ಚರಿಕೆ ಕೊಟ್ಟ ಅನಿರುದ್ಧ್
ವಿಷ್ಣುವರ್ಧನ್ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿರುವರಿಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಗೊತ್ತಿಲ್ಲದವರು ಮಾತನಾಡುತ್ತಿದ್ದಾರೆ. ಅಭಿಮಾನಿಗಳೆಂದು ಮುಖವಾಡ ಹಾಕಿಕೊಂಡ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ. ಇಷ್ಟಾದರು ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನಕಾರಾತ್ಮಕ ಕಾಮೆಂಟ್ ಮಾಡುವವರು ನಮ್ಮ ಅಪ್ಪಾಜಿಯ ಅಭಿಮಾನಿಗಳೇ ಅಲ್ಲ. ನಮ್ಮ ಅಪ್ಪನಿಗೆ ನಕಾರಾತ್ಮಕ ಕಾಮೆಂಟ್ ಇಷ್ಟವಾಗುತ್ತಿರಲಿಲ್ಲ. ಮೈಸೂರಿನಲ್ಲಿ ಇಷ್ಟು ದೊಡ್ಡ ಸ್ಮಾರಕ ಆಗಿದೆ. ಈ ರೀತಿ ಯಾರ ಸ್ಮಾರಕವೂ ಇಲ್ಲ. ಕರ್ನಾಟಕ ರತ್ನ ತೆಗೆದುಕೊಳ್ಳಲು ನಮ್ಮ ಅಪ್ಪಾಜಿ ಅರ್ಹರು. ಇದು ಕೇಳಿ ಪಡೆದುಕೊಳ್ಳುವ ಪ್ರಶಸ್ತಿ ಅಲ್ಲ. ನಾವು ಅಭಿಮಾನಿಗಳ ಜೊತೆಯಲ್ಲಿದ್ದೇವೆ. ಏನೇ ಸಂಶಯಗಳಿದ್ರೆ ನನ್ನ ಬಳಿ ಬಂದು ನೇರವಾಗಿ ಕೇಳಿ ಎಂದು ಅನಿರುದ್ಧ್ ಹೇಳಿದರು. ಈ ವೇಳೆ ಮಗಳು ಕೀರ್ತಿ ವಿಷ್ಣುವರ್ಧನ್ ಹಾಗೂ ಅಭಿಮಾನಿಗಳು ಹಾಜರಿದ್ದರು.
