ಸು ಫ್ರಂ ಸೋ ಚಿತ್ರದಲ್ಲಿ ಭಾನು ಪಾತ್ರದ ಮೂಲಕ ಇಡೀ ಸಿನಿಮಾದ ದಿಕ್ಕನ್ನೇ ಬದಲಿಸಿದ ನಟಿ ಸಂಧ್ಯಾ ಅರಕೆರೆಯವರು ಈ ಚಿತ್ರದ ಸಕ್ಸಸ್​ ಬಗ್ಗೆ ಹೇಳಿದ್ದೇನು ಕೇಳಿ... 

ನೂರಾರು ಕೋಟಿ ಬಂಡವಾಳ ಹಾಕಿ ಧೂಳೆಬ್ಬಿಸುವ, ಹಲವು ಬಾರಿ ಫ್ಲಾಪ್​ ಕೂಡ ಆಗ್ತಿರೋ ಹಲವು ಚಿತ್ರಗಳ ನಡುವೆ ಐದಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸು ಫ್ರಮ್ ಸೋ (Su From So) ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳದ ಎಷ್ಟೋ ಪಟ್ಟು ಹಣ ವಾಪಸ್​ ಬಂದಿದೆ. ರಾಜ್ ಬಿ ಶೆಟ್ಟಿ ಮತ್ತು ತಂಡ ನಿರ್ಮಾಣ ಮಾಡಿರುವ, ಜೆಪಿ ತುಮಿನಾಡು ನಟಿಸಿ, ಕತೆ ಬರೆದು, ನಿರ್ದೇಶನ ಮಾಡಿರುವ ಚಿತ್ರ ತನ್ನ ಕಂಟೆಂಟ್ ಮೂಲಕವೇ ಗೆದ್ದಿದೆ. ಜೊತೆಗೆ ಪ್ರತಿಯೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂತಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರಗಳು ಸಹ ಚಿತ್ರಕ್ಕೆ ಜೀವ ತುಂಬಿವೆ. ಅದು ರವಿ ಅಣ್ಣ ಇರಬಹುದು, ಅಶೋಕ, ಭಾವ ಹೀಗೆ ಪ್ರತಿಯೊಬ್ಬರು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ಭಾನು ಪಾತ್ರಧಾರಿ ಒಂದು ಕ್ಷಣ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಾರೆ.

ಭಾನು ಪಾತ್ರಧಾರಿಯ ಹೆಸರು ಸಂಧ್ಯಾ ಅರಕೆರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆಯವರು ಸಂಧ್ಯಾ. ಇದೀಗ ಅವರು ಚಿತ್ರದ ಬಗ್ಗೆ, ಚಿತ್ರ ಇಷ್ಟೊಂದು ಹಿಟ್​ ಆಗಲು ಕಾರಣ ಏನು ಎನ್ನುವ ಬಗ್ಗೆ ಕನ್ನಡ ಪಿಚ್ಚರ್​ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಒಂದು ಸೀರಿಯಲ್​ ವಿಷ್ಯವನ್ನು ಸೀರಿಯಲ್​ ಆಗಿ ಹೇಳಿರೋ ಎಷ್ಟೊಂದು ಸಿನಿಮಾಗಳು ಬಂದಿವೆ. ಎಲ್ಲವನ್ನೂ ಜನರು ಸ್ವೀಕರಿಸುತ್ತಾರೆ ಎಂದು ಹೇಳಲು ಆಗಲ್ಲ. ಅದೇ ರೀತಿ ಕಾಮಿಡಿಗಳ ಮಧ್ಯೆ ಇನ್ನೊಂದು ಕಾಮಿಡಿ ಮಾಡಿ ಇ ಚಿತ್ರವನ್ನು ಮುಗಿಸಿಬಿಡಬಹುದಿತ್ತು. ಆಗಲೂ ಜನರಿಗೆ ಇಷ್ಟೆಲ್ಲಾ ಇಂಪ್ಯಾಕ್ಟ್​ ಆಗ್ತಿರಲಿಲ್ಲ. ಆದರೆ ಈ ಚಿತ್ರದಲ್ಲಿ ಅದನ್ನು ಬೇರೆಯದ್ದೇ ರೀತಿಯಲ್ಲಿ ಹೇಳಿದ್ದರಿಂದ ಜನರಿಗೆ ಅಷ್ಟು ನಾಟಿತು ಎಂದಿದ್ದಾರೆ ನಟಿ. ಮೊದಲ ಹಾಫ್​ನಲ್ಲಿ ಅದು ಕಾಮಿಡಿ ಆಗಿರಲಿಲ್ಲ. ಆದರೆ ಆ ಕಥೆ ಬಹಳ ಜನರು ತಮ್ಮ ಜೊತೆ ಕನೆಕ್ಟ್​ ಮಾಡಿಕೊಂಡರು. ಎಲ್ಲಾ ಭಾಗದವರಿಗೂ ಅದು ಒಂದೊಂದು ರೀತಿಯಲ್ಲಿ ಕನೆಕ್ಟ್​ ಆಯಿತು. ಎಲ್ಲರೂ ಈ ಚಿತ್ರವನ್ನು ಇಷ್ಟು ಮೆಚ್ಚಿಕೊಂಡಿರೋದಕ್ಕೆ ಕಾರಣ, ಆ ಲೈಫ್​ ಅನ್ನು ನಾವು ಎಲ್ಲೋ ಮಿಸ್​ ಮಾಡಿಕೊಳ್ತಿದ್ದೇವೆ. ಆ ಮದುವೆ,, ಸಾವಿನ ದೃಶ್ಯ, ಮನೆಯಲ್ಲಿ ಜನರು ಒಟ್ಟುಗೂಡೋದು... ಹೀಗೆ ಏನೇನೋ ಜನರಿಗೆ ಕನೆಕ್ಟ್​ ಆಗಿದೆ ಎಂದಿದ್ದಾರೆ ನಟಿ ಸಂಧ್ಯಾ.

ಬಟ್ಟೆಯಲ್ಲಿ ಸುತ್ತಿಕೊಂಡು ಚಪ್ಪಲಿಯಲ್ಲಿ ಹೊಡೆದ ಹಾಗೆ...

ಹೇಳುವ ವಿಷಯವನ್ನು ನೇರವಾಗಿ ಹೇಳಿದ್ರೆ ಜನರಿಗೆ ಕನೆಕ್ಟ್​ ಆಗ್ತಿರಲಿಲ್ಲ. ಆದರೆ ಬಟ್ಟೆಯಲ್ಲಿ ಸುತ್ತಿಕೊಂಡು ಚಪ್ಪಲಿಯಲ್ಲಿ ಹೊಡೆದ ಹಾಗೆ ಹೇಳಲಾಗಿದೆ. ನೇರವಾಗಿ ಹೇಳಿದ್ರೆ ಹಲವರಿಗೆ ಸಿಟ್ಟು ಬರುತ್ತಿತ್ತು. ಆದರೆ ಅವರಿಗೆ ಅರಿವೇ ಇಲ್ಲದಂತೆ ಮನಸ್ಸಿನ ಒಳಗೆ ಈ ಕಥೆಯನ್ನು ಇಳಿಸಲಾಗಿದೆ. ಅದಕ್ಕಾಗಿ ಇದು ಇಷ್ಟೊಂದು ಸಕ್ಸಸ್​ ಕಂಡಿದೆ ಎಂದಿದ್ದಾರೆ ನಟಿ. ಇನ್ನು ನಟಿಯ ಕುರಿತು ಹೇಳುವುದಾದರೆ, ಸಂಧ್ಯಾ ಅವರ ಓದು ಮಂಡ್ಯ, ಮೈಸೂರಿನಲ್ಲಾಯಿತು. ಬಳಿಕ ನೀನಾಸಂ ಸೇರಿ, ಅಲ್ಲಿ ನಟನೆಯನ್ನ ಕಲಿತರು. ಥಿಯೇಟರ್ ನಲ್ಲಿ ಎಂಎ ಮಾಡಲು ಬೆಂಗಳೂರಿಗೆ ಬಂದ ಸಂಧ್ಯಾಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕವು. ಸಂಧ್ಯಾ ‘ಸುಳಿ’ ಸಿನಿಮಾ ಮೂಲಕ ಚಂದನವನಕ್ಕೆ (Sandalwood)ಎಂಟ್ರಿ ಕೊಟ್ಟರು. ಬಳಿಕ. ಪ್ರಕಾಶ್ ರೈ ಪ್ರೆಸೆಂಟ್ ಮಾಡಿದ್ದ ‘ಫೋಟೋ’, ಸಿನಿಮಾದಲ್ಲಿ ಅಭಿನಯಿಸಿ, ತಮ್ಮ ಅಭಿನಯದ ಮೂಲಕ ಅದ್ಭುತ ನಟಿ ಎನಿಸಿಕೊಂಡರು. ಬಳಿಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮ ಸೇನ ನಳ ಮಹರಾಜ’, ‘ಒಂದಲ್ಲ ಎರಡಲ್ಲ’, ‘ಬೈ ಟು ಲವ್’ ಮೊದಲಾದ ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸು ಪ್ರಮ್ ಸೋ ಸಿನಿಮಾದಲ್ಲಿ ಪೂರ್ತಿಯಾಗಿ ಮಂಗಳೂರಿಗರೇ ಇದ್ದಾರೆ. ಅಂತದುರಲ್ಲಿ ಈ ಚಿತ್ರದಲ್ಲಿ ಸಂಧ್ಯಾ ಅರಕೆರೆಗೆ ಅವಕಾಶ ಕೊಟ್ಟಿದ್ದು, ನಿರ್ಮಾಣದಲ್ಲಿ ಕೈ ಜೋಡಿಸಿದ ರಾಜ್ ಬಿ ಶೆಟ್ಟಿ (Raj B Shetty). ಯಾಕಂದ್ರೆ ರಾಜ್ ಜೊತೆ ಸಂಧ್ಯಾ ಈ ಹಿಂದೆ ಎರಡು ಸಿನಿಮಾನಲ್ಲಿ ನಟಿಸಿದ್ದರು. ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಸಂಧ್ಯಾ ನಟಿಸಿದ್ದರು. ಈ ಸಿನಿಮಾದಲ್ಲಿ ಸಂಧ್ಯಾ ಅವರ ನಟನೆ ನೋಡಿದ್ದ, ರಾಜ್ ಬಿ ಶೆಟ್ಟಿ ನಂತರ ಟೋಬಿ (Toby) ಸಿನಿಮಾದಲ್ಲಿ ಅವಕಾಶ ಕೊಟ್ಟರು. ಹಾಗಾಗಿ ಸು ಫ್ರಮ್ ಸೋ ಸಿನಿಮಾ ಕಥೆಯಲ್ಲಿ ಈ ಭಾನು ಪಾತ್ರಕ್ಕೆ ಸಂಧ್ಯಾ ಅರಕೆರೆ ಸರಿಯಾದ ನಟಿ ಎಂದು ಆಯ್ಕೆ ಮಾಡಿದ್ದು ಕೂಡ ರಾಜ್ ಬಿ ಶೆಟ್ಟಿ. ಅವರ ಅನಿಸಿಕೆ ಖಂಡಿತಾ ಸುಳ್ಳಾಗಲಿಲ್ಲ. ಸಿನಿಮಾದಲ್ಲಿ ಪ್ರತಿಯೊಂದು ನಗಿಸುವ ಪಾತ್ರಗಳ ಮಧ್ಯೆ, ಸಂಧ್ಯಾ ಅವರ ಮನೋಜ್ಞ ಅಭಿನಯ ವೀಕ್ಷಕರನ್ನು ಕಾಡಿದ್ದು ನಿಜಾ.

YouTube video player