SIIMA AWARD 2025: ನಟ ದುನಿಯಾ ವಿಜಯ್ ಅವರು ದುಬೈನಲ್ಲಿ ಕನ್ನಡಿಗರ ಪರವಾಗಿ ದನಿ ಎತ್ತಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕೆ ಅವರು ಆಕ್ರೋಶ ಹೊರಹಾಕಿದ್ದಾರೆ.
ಯಾರೂ ಇಲ್ಲದಿದ್ದಾಗ ಸ್ಟೇಜ್‌ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟು ಸರಿ ಎಂದು ನಿನ್ನೆ ರಾತ್ರಿ ( ಶುಕ್ರವಾರ ) ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಅವರು ಆಕ್ರೋಶ ಹೊರಹಾಕಿದ್ದಾರೆ. ನಟ ದುನಿಯಾ ವಿಜಯ್ ಅವರಿಗೆ ಬೆಸ್ಟ್ ನಟ ಕ್ರಿಟಿಕ್ಸ್ ಸಿಕ್ಕಿದೆ. ಈ ಪ್ರಶಸ್ತಿ ಸಿಕ್ಕ ಬಳಿಕ ಅವರು ವೇದಿಕೆ ಮೇಲೆಯೇ ಈ ಬೇಸರವನ್ನು ಹೊರಹಾಕಿದ್ದಾರೆ. ಅಂದಹಾಗೆ ದುಬೈನಲ್ಲಿ ಸೆಪ್ಟೆಂಬರ್ 5, 6ರಂದು ಸೈಮಾ ಪ್ರಶಸ್ತಿ ಪ್ರಧಾನ ನಡೆಯಲಿದೆ. ಈ ವೇಳೆ ವಿಜಯ್ ಮಾತನಾಡಿದ್ದಾರೆ.
“ಕನ್ನಡ ಮೇಲಿದೆ, ಅದನ್ನು ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಹೀಗಾದ್ರೆ ಇನ್ಮುಂದೆ ನಾವ್ಯಾರು ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನು ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರ್ ಇಲ್ಲದಿದ್ದಾಗ ನಮ್ಮನ್ನು ವೇದಿಕೆಗೆ ಕರೆಯೋದು ಯಾಕೆ..?” ಎಂದು ದುನಿಯಾ ವಿಜಯ್ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ದೊಡ್ಡ ತಾರಾಬಳಗ ಭಾಗಿ
ದುನಿಯಾ ವಿಜಯ್ ಕನ್ನಡಪರ ದನಿಗೆ ದುಬೈ ಕನ್ನಡಿಗರು ಬಹುಪರಾಕ್ ಹೇಳಿದ್ದಾರೆ. ನಟ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಆಶಿಕಾ ರಂಗನಾಥ್, ಊರ್ವಶಿ ಚೌಧರಿ, ಅಭಿರಾಮಿ, ನಟಿ ಮೀನಾಕ್ಷಿ ಚೌಧರಿ, ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ನಟ ಅಲ್ಲು ಅರ್ಜುನ್, ಸುಮಲತಾ ಅಂಬರೀಶ್, ತೇಜ್ ಸಜ್ಜಾ, ಇಮ್ರಾನ್ ಸರ್ದಾರಿಯಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ ಕನ್ನಡದ ಸಾಕಷ್ಟು ಕಲಾವಿದರು, ನಿರ್ದೇಶಕರು ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ದುನಿಯಾ ವಿಜಯ್ ನಂತರ ಕಿಚ್ಚ ಸುದೀಪ್ ಅವರಿಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಸುದೀಪ್ ಪರವಾಗಿ ವಿ.ನಾಗೇಂದ್ರ ಪ್ರಸಾದ್ ಸ್ವೀಕರಿಸಿದಾಗಲೂ ಯಾರೂ ಇರಲಿಲ್ಲ.
ವೇದಿಕೆ ಮೇಲೆ ತಿರುಗೇಟು ನೀಡಿದ್ದ ಯಶ್
ಈ ಹಿಂದೆ ನಿರ್ಮಾಪಕ ದಿಲ್ ರಾಜು ಅವರು ವೇದಿಕೆಯೊಂದರಲ್ಲಿ “ಕನ್ನಡ ಚಿತ್ರರಂಗ ತುಂಬ ಚಿಕ್ಕದು ಎಂದು ಭಾವಿಸಿದ್ದೆವು” ಎಂದು ಹೇಳಿದ್ದರು. ಆಗ ಅಲ್ಲಿಯೇ ಇದ್ದ ನಟ ಯಶ್ ಅವರು, “ಚಿತ್ರರಂಗ ಚಿಕ್ಕದಲ್ಲ. ನಮ್ಮ ಕಲಾವಿದರು, ತಂತ್ರಜ್ಞರು ತುಂಬ ಕಷ್ಟಪಡುತ್ತಿದ್ದಾರೆ. ನಮ್ಮ ಸಿನಿಮಾಗಳು 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿವೆ, ಇದು ಉಳಿದ ಭಾಷೆಯವರಿಗೆ ಯಾಕೆ ಅರ್ಥ ಆಗಿಲ್ಲ ಎಂದು ಗೊತ್ತಾಗ್ತಿಲ್ಲ” ಎಂದು ಹೇಳಿದ್ದರು.
