ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರದಲ್ಲಿರುವ ಸಿಂಧೂ ನದಿ ದಂಡೆಯಲ್ಲೇ ಉಪೇಂದ್ರ- ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ ಎಂದರು ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.
‘ನಾನು ನಿರ್ದೇಶಕನಾಗಿ 50 ವರ್ಷಗಳಾಗಿದೆ. ಈ ಹೊತ್ತಲ್ಲಿ ನನ್ನ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಮೊದಲು ‘ರಕ್ತ ಕಾಶ್ಮೀರ’ ಚಿತ್ರ ಬಿಡುಗಡೆಯಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥಾಹಂದರವನ್ನು ಹೊಂದಿರುವ ಚಿತ್ರವಿದು. ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರದಲ್ಲಿರುವ ಸಿಂಧೂ ನದಿ ದಂಡೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ’.
ಹೀಗೆ ಹೇಳಿದ್ದು ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು. ಅವರು ತಾವು ನಿರ್ದೇಶಿಸಿರುವ, ಉಪೇಂದ್ರ- ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದರು. ಈ ಕುರಿತು ಅವರು, ಉಪೇಂದ್ರ ಈ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಮ್ಯ ಅವರು ಆರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡದ ಹದಿನಾಲ್ಕು ನಾಯಕ ನಟರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿದ್ದಾರೆ.
14 ನಾಯಕರು ಒಂದೇ ಹಾಡಿನಲ್ಲಿ
ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ ಲೈನ್ ವೆಂಕಟೇಶ್ ಒಂದೇ ಹಾಡಿನಲ್ಲಿ ಅಭಿನಯಿಸಿರುವುದು ಇತಿಹಾಸ ಎಂದರು. ಆದಿತ್ಯ, ‘ನಾನು ಈ ಚಿತ್ರದ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ’ ಎಂದರು. ವಿತರಕ ಮಾರ್ಸ್ ಸುರೇಶ್, ‘ವೀರ ಕಂಬಳ’ ನಿರ್ಮಾಪಕ ಅರುಣ್ ರೈ ತೋಡಾರ್, ಕೃಷ್ಣೇಗೌಡ ಇದ್ದರು.
ಇನ್ನು, ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಗಡಿ ಪ್ರದೇಶ ಅಷ್ಟೇ ಅಲ್ಲ, ಬೆಂಗಳೂರಿನಲ್ಲೂ ಉಗ್ರಗಾಮಿಗಳ ಕಾಟವಿದೆ. ಅದರ ನಿರ್ಮೂಲನೆಗೆ ಸಂಬಂಧಿಸಿದ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ.
