ಪ್ರವೀರ್ ಶೆಟ್ಟಿ, ರಿಷಿಕಾ ನಾಯ್ಕ್ ನಟನೆಯ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಸುರಾಗ್ ಸಾಗರ್ ನಿರ್ದೇಶನ, ಜಯರಾಮ್ ದೇವಸಮುದ್ರ ನಿರ್ಮಾಣವಿದೆ. ಸಿನಿಮಾ ಬಗ್ಗೆ ಪ್ರವೀರ್ ಶೆಟ್ಟಿ ಹಂಚಿಕೊಂಡ ಮಾತುಗಳು ಇಲ್ಲಿವೆ.
ಪ್ರವೀರ್ ಶೆಟ್ಟಿ, ರಿಷಿಕಾ ನಾಯ್ಕ್ ನಟನೆಯ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಸುರಾಗ್ ಸಾಗರ್ ನಿರ್ದೇಶನ, ಜಯರಾಮ್ ದೇವಸಮುದ್ರ ನಿರ್ಮಾಣವಿದೆ. ಸಿನಿಮಾ ಬಗ್ಗೆ ಪ್ರವೀರ್ ಶೆಟ್ಟಿ ಹಂಚಿಕೊಂಡ ಮಾತುಗಳು ಇಲ್ಲಿವೆ.
- ನಾನು ರಾತ್ರಿ 9 ಗಂಟೆಗೆ ನಿದ್ರೆ ಮಾಡುವವ. ನಮ್ಮ ನಿದ್ದೆ, ಊಟ ಎಲ್ಲಾ ಆರೋಗ್ಯಕರ ಆಗಬೇಕು ಅಂತ ಬಯಸುವವನು. ಆದರೆ ಈ ಸಿನಿಮಾದ ನಾಯಕ ಧ್ರುವ ರಾತ್ರಿ ಇಡೀ ಜಾಗರಣೆ ಮಾಡುವವನು. ಅವನ ನೆರಳು ಕಂಡರೆ ನಿದ್ರೆ ಓಡಿಹೋಗುತ್ತೆ. ಈ ಪುಣ್ಯಾತ್ಮನ ಚರಿತ್ರೆ, ಪುರಾಣ ಎಲ್ಲವನ್ನೂ ಗ್ರಹಿಸಿ ಆತನನ್ನು ನನ್ನೊಳಗೆ ಆವಾಹಿಸಿಕೊಳ್ಳಲು ನಾನೂ ನಿದ್ರಾಹೀನನಾಗಬೇಕಾಯಿತು.
- ಮೊದಲೆಲ್ಲ ಬೆಳಗ್ಗೆ ವರ್ಕೌಟ್ ಮಾಡ್ತಿದ್ದವನು ಈ ಪಾತ್ರಕ್ಕಾಗಿ ರಾತ್ರಿ ವರ್ಕೌಟ್ ಶುರು ಮಾಡಿದೆ. ಏನೇನೋ ಸರ್ಕಸ್ ಮಾಡಿ ನಿದ್ರಾಹೀನತೆಯ ಅನುಭವ ಪಡೆದೆ. ಯಾವಾಗ ಸಿನಿಮಾ ಶೂಟಿಂಗ್ ಟೇಕಾಫ್ ಆಯಿತೋ ಆವಾಗಿಂದ ರಾತ್ರಿ ಹಗಲೆನ್ನದೇ ಸಿನಿಮಾದಲ್ಲಿ ತೊಡಗಿಸಿಕೊಂಡು ನಿಜಕ್ಕೂ ನಾಯಕನಿಗಿರುವ ಇನ್‌ಸೋಮ್ನಿಯಾ ಅಂದರೆ ನಿದ್ರಾಹೀನತೆಯನ್ನು ಅನುಭವಿಸಿದೆ.
- ಈ ಸಿನಿಮಾದ ಆ್ಯಂಥಮ್ ಸಾಂಗ್ ಸಖತ್ ಫೇಮಸ್ ಆಗಿತ್ತು. ಅದಕ್ಕಾಗಿ ನಿರಂತರ 46 ಗಂಟೆಗಳ ನೈಟ್ ಶೂಟಿಂಗ್ ನಡೆಯಿತು. ನನಗೆ ಎರಡೂ ಕಡೆ ಭುಜ ಡಿಸ್‌ಲೊಕೇಟ್ ಆಗಿದೆ. ಹೆಚ್ಚು ಒತ್ತಡ ಹಾಕುವಂತಿಲ್ಲ. ಅದಕ್ಕೋಸ್ಕರ ಶೋಲ್ಡರ್ಸ್ ಸ್ಟ್ರಾಪ್ ಹಾಕ್ಕೊಂಡು ನಿರಂತರವಾಗಿ ಶೂಟ್‌ನಲ್ಲಿ ಪಾಲ್ಗೊಂಡೆ. ದೇಹ ಸ್ನಾಯುಗಳೆಲ್ಲ ಎದ್ದು ಕಾಣುವಂತಿರಬೇಕಿತ್ತು. ಅದಕ್ಕೋಸ್ಕರ ತುಂಬಾ ದಿನ ನೀರು ಕುಡಿದಿರಲಿಲ್ಲ. ಡ್ಯಾನ್ಸ್‌ಗಾಗಿ 20 ಫೀಟ್‌ನಿಂದ ದೇಹ ನೇತುಹಾಕಿದ್ರು, ನೀರು ಕುಡಿಯದೇ ಇರುವ ಕಾರಣ ಸೆಳೆತ ಉಂಟಾಗುತ್ತಿತ್ತು. ಹೀಗೆಲ್ಲಾ ಸಿನಿಮಾಗಾಗಿ ಬಹಳ ಕಷ್ಟಪಟ್ಟಿದ್ದೇವೆ. ಆಮೇಲೆ ವಿಷ್ಯುವಲ್ ನೋಡುವಾಗ ಖುಷಿ ಆಯ್ತು.
- ಇಡೀ ಸಿನಿಮಾ ವಿಶ್ಯುವಲ್ ಟ್ರೀಟ್. ಹೊಸ ಬಗೆಯ ಕಥೆ, ನಕುಲ್ ಅಭಯಂಕರ್ ಸಂಗೀತ, ಅದ್ಭುತ ವಿಶ್ಯುವಲೈಸೇಶನ್, ಡಿಐ ಮೂಲಕ ಉತ್ತಮ ಕಲರ್ ಕರೆಕ್ಷನ್ಸ್ ಇತ್ಯಾದಿಗಳನ್ನು ಸಿನಿಮಾದಲ್ಲಿ ನೋಡಬಹುದು.
- ನಾನು ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ಮೂಲ ಕುಂದಾಪುರ. ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಮಗ ಅಂತಲೇ ಗುರುತಾಗಿರುವ ಬಗ್ಗೆ ಬೇಜಾರೇನೂ ಇಲ್ಲ. ನಾಯಕ ನಟನಾಗಿ ಕ್ಲಿಕ್ ಆದರೆ ಇದೆಲ್ಲ ಮರೆಗೆ ಸರಿದು ಇಲ್ಲಿಯವರೆಗೆ ಬರಲು ನಾನು ಪಟ್ಟ ಪರಿಶ್ರಮ, ನನ್ನ ಸಾಮರ್ಥ್ಯಗಳೆಲ್ಲ ಮುನ್ನೆಲೆಗೆ ಬರುತ್ತವೆ ಅನ್ನೋದು ತಿಳಿದಿದೆ. ಆ ದಿನಕ್ಕಾಗಿ ಕಾಯುತ್ತಿದ್ದೇನೆ.
ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ವ್ಯಾಕರಣ ಕಲಿತೆ
- ಸಿವಿಲ್ ಇಂಜಿನಿಯರಿಂಗ್ ಮಾಡಿ ಆಮೇಲೆ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ವ್ಯಾಕರಣ ಕಲಿತೆ. ನಮ್ಮ ಈ ಸಿನಿಮಾದ ನಿರ್ದೇಶಕ ಸುರಾಗ್ ಯುರೋಪ್‌ನಲ್ಲಿ ಸಿನಿಮಾ ಮೇಕಿಂಗ್ ಸ್ಟಡಿ ಮಾಡಿ ಬಂದವರು. ಈಗ ಸಿನಿಮಾನೇ ನಮ್ಮ ಜಗತ್ತಾಗಿದೆ.
