'ಕಾಂತಾರ ಚಾಪ್ಟರ್-1' ಚಿತ್ರದಲ್ಲಿ ಮ್ಯೂಟಂಟ್ ರಘು ಖ್ಯಾತಿಯ ರಾಘವೇಂದ್ರ ಹೊಂಡದಕೇರಿ ತಮ್ಮ ಪಾತ್ರದ ಮೇಕಪ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿದಿನ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವೇಷಭೂಷಣಗಳೊಂದಿಗೆ ಚಿತ್ರೀಕರಣದ ಸವಾಲುಗಳನ್ನು ವಿವರಿಸಿದ್ದಾರೆ.
ಕಾಂತಾರ ಚಾಪ್ಟರ್-1 (Kantara Chanpter-1) ದೇಶಾದ್ಯಂತ ಹಲ್‌ಚಲ್ ಸೃಷ್ಟಿಸಿರುವ ನಡುವೆಯೇ, ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ರಿಷಬ್ ಶೆಟ್ಟಿ ಅವರ ಕಾಲು ಭಯಾನಕ ರೂಪ ಪಡೆದಿರುವುದನ್ನು ಅವರು ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅತ್ಯಂತ ಕ್ಲಿಷ್ಟಕರ ಎನ್ನಿಸಿದ್ದ ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ಅವರ ಕಾಲು ಕಪ್ಪುಗಟ್ಟಿರುವುದನ್ನು ಈ ಫೋಟೋಗಳಲ್ಲಿ ನೋಡಬಹುದಾಗಿದೆ. ಅದೇ ರೀತಿ ಕಾಂತಾರಾ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮ್ಯೂಟಂಟ್ ರಘು ಎಂದೇ ಪರಿಚಯವಾಗಿರುವ ರಾಘವೇಂದ್ರ ಹೊಂಡದಕೇರಿ. “ರಾಣ’ ಚಿತ್ರದ ಮೂಲಕ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಟ ಈ ಸಿನಿಮಾದಲ್ಲಿ ಒಂದು ಲೆವೆಲ್ ಮೇಲಕ್ಕೆ ಹೋಗಿರುವಂಥ ಆಕ್ಟಿಂಗ್ ಮಾಡಿರುವುದಾಗಿ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮೇಕಪ್ ಕುರಿತು ಮಾಹಿತಿ
ರಘು ಅವರು ಕಾಂತಾರ ಚಿತ್ರದಲ್ಲಿ ಮಾಡಿಕೊಂಡಿರುವ ಮೇಕಪ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಕಾಂತಾರ ಅಧ್ಯಾಯ 1 ನಟನೆಗಿಂತಲೂ ಹೆಚ್ಚಿನದಾಗಿತ್ತು. ಅದು ಉತ್ಸಾಹ, ತಾಳ್ಮೆ ಮತ್ತು ತಂಡದ ಕೆಲಸವಾಗಿತ್ತು ಎಂದಿದ್ದಾರೆ. ಇದಕ್ಕಾಗಿ 10 ರಿಂದ 12 ದಿನಗಳ ತೀವ್ರ ತಯಾರಿ ನಡೆಸಲಾಗಿತ್ತು. ಪ್ರತಿದಿನ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವಿಗ್‌ಗಳು, ವೇಷಭೂಷಣಗಳು ಮತ್ತು ಕುಂದಾಪುರದ ಬಿಸಿಲಿನಲ್ಲಿ ನಿದ್ದೆಯಿಲ್ಲದ ರಾತ್ರಿ ಚಿತ್ರೀಕರಣಗಳು ನನ್ನ ಮಿತಿಗಳನ್ನು ಮೀರಿ ಬೆಳೆದವು ಎಂದಿದ್ದಾರೆ.
ಎಲ್ಲರಿಗೂ ಕೃತಜ್ಞತೆ
ಆದರೆ ಇಂದು, ದೊಡ್ಡ ಪರದೆಯ ಮೇಲೆ ನನ್ನನ್ನು ನೋಡುವುದರಿಂದ ಅದೆಲ್ಲವೂ ಸಾರ್ಥಕವಾಗಿದೆ. ಮೇಕಪ್ ತಂಡ, ಕ್ಯಾಮೆರಾದ ಹಿಂದಿನ ಸಿಬ್ಬಂದಿ ಮತ್ತು ಎಲ್ಲರಿಗೂ ಗೌರವ ಮತ್ತು ಕೃತಜ್ಞತೆಗಳು ಎಂದು ನಟ ತಿಳಿಸಿದ್ದಾರೆ. 6.4 ಅಡಿ ಎತ್ತರ, 125 ಕೆಜಿ, ಆಜಾನಬಾಹು ರಘು ಅವರು ಇದಾಗಲೇ, ಕಾಟೇರ, ಗರಡಿ, ಕ್ರಾಂತಿಯಂಥ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಕೆಡಿ, ವೃಷಭ, ಮುಧೋಳ್, ಬರ್ಮ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ವೃಷಭ ಚಿತ್ರದಲ್ಲಿ ವಿಶೇಷ ಲುಕ್
ಇವರು ಈ ಹಿಂದೆ ಗಮನ ಸೆಳೆದದ್ದು “ವೃಷಭ’ ಚಿತ್ರದಲ್ಲಿ ರಘು ಪಾತ್ರದ ಮೂಲಕ. ವಿಭಿನ್ನ ಮೇಕಪ್‌ನಲ್ಲಿ ಹಾಲಿವುಡ್ ರೇಂಜ್‌ಗೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಆರೇಳು ಗಂಟೆ ಮೇಕಪ್‌ಗೆ ತೆಗೆದುಕೊಳ್ಳುತ್ತಿದ್ದಂತೆ. ಸುಮಾರು 15 ವರ್ಷಗಳ ಕಾಲ ಆ್ಯನಿಮೇಷನ್ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿದ್ದ ಕಾರಣ, ಮೇಕಪ್ ಬಳಿಕ ನಾನೇ ಡೀಟೇಲಿಂಗ್ ಮಾಡಿಕೊಳ್ಳುತ್ತಿದ್ದೆ ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿದರು. ಇನ್ನು ರಘು ಅವರದ್ದು ಬಹುಮುಖ ಪ್ರತಿಭೆ. ಆ್ಯನಿಮೇಷನ್ ಕಲಾವಿದನಾಗಿ 15 ವರ್ಷ ಅನುಭವವಿರುವ ರಘು ಹಾಲಿವುಡ್‌ನ ಹಿಟ್ ಪೆಂಗ್ವಿನ್ಸ್’, “ಮಡಗಾಸ್ಕರ್’, “ಹೌ ಟು ಟ್ರೇನ್, ಯುವರ್ ಡ್ರಾಗನ್’ ಸೇರಿ ಹಲವು ಆ್ಯನಿಮೇಟೆಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲದೇ ಬಾಡಿ ಬಿಲ್ಡಿಂಗ್, ಸ್ಟ್ರಾಂಗ್ ಮ್ಯಾನ್, ಪವರ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
