ಸಿನಿಮಾ ರಂಗದಲ್ಲಿ ಡೈರೆಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ವಿಷ್ಣುವರ್ಧನ್‌, ಅಂಬರೀಶ್‌ ಅವರೊಂದಿಗೆಲ್ಲ ಕೆಲಸ ಮಾಡಿದೆ. ಸಿನಿಮಾರಂಗಕ್ಕೆ ಬಂದು ಇಷ್ಟು ಕಾಲವಾದರೂ ಸ್ವತಂತ್ರ ಸಿನಿಮಾ ಮಾಡಲು ಇದೀಗ ಸಾಧ್ಯವಾಗಿದೆ ಎನ್ನುತ್ತಾರೆ ನಿರ್ದೇಶಕ ವಿರೇನ್‌.

ಉತ್ತರ ಕರ್ನಾಟಕದ ಸಂಸ್ಕೃತಿ, ಜನಪದದ ಜೊತೆಗೆ ಅಲ್ಲಿನ ಬದುಕಿನ ಚಿತ್ರಗಳನ್ನು ಕಟ್ಟಿಕೊಡುವ ಸಿನಿಮಾ ‘ಕೈಟ್ ಬ್ರದರ್ಸ್‌’. ಬಹು ಕಾಲದಿಂದ ಚಿತ್ರರಂಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವಿರೇನ್‌ ಸಾಗರ್‌ ಬಗಾಡೆ ಈ ಚಿತ್ರದ ನಿರ್ದೇಶಕರು. ಈ ಸಿನಿಮಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ನಿರ್ದೇಶಕ ವಿರೇನ್‌ ಸಾಗರ್‌ ಬಗಾಡೆ, ‘ಸಿನಿಮಾ ರಂಗದಲ್ಲಿ ಡೈರೆಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ವಿಷ್ಣುವರ್ಧನ್‌, ಅಂಬರೀಶ್‌ ಅವರೊಂದಿಗೆಲ್ಲ ಕೆಲಸ ಮಾಡಿದೆ. ಸಿನಿಮಾರಂಗಕ್ಕೆ ಬಂದು ಇಷ್ಟು ಕಾಲವಾದರೂ ಸ್ವತಂತ್ರ ಸಿನಿಮಾ ಮಾಡಲು ಇದೀಗ ಸಾಧ್ಯವಾಗಿದೆ’ ಎನ್ನುತ್ತಾರೆ.

‘ಕೈಟ್‌ ಬ್ರದರ್ಸ್‌’ ಸಿನಿಮಾದ ಬಗ್ಗೆ ವಿವರ ನೀಡುವ ಅವರು, ‘ಇದು ಧಾರವಾಡ ಸೊಗಡಿನ ಭಾಷೆ, ಪರಿಸರದಲ್ಲಿ ಅರಳುವ ಕಥೆ. ಗಾಳಿಪಟದ ಹಿನ್ನೆಲೆಯಲ್ಲಿ ಶಿಕ್ಷಣದ ಸೂತ್ರ ರೂಪಿಸಿಕೊಳ್ಳುವ ಬಗೆ ಇಲ್ಲಿದೆ. ಶ್ರೀರಾಮ ಮತ್ತು ಹನೂಮಂತ ಎಂಬ ಇಬ್ಬರು ಮಕ್ಕಳ ಮೂಲಕ ಕಥಾಜಗತ್ತು ತೆರೆದುಕೊಳ್ಳುತ್ತದೆ. ಸರ್ಕಾರಿ ಶಾಲೆಯ ಇಂದಿನ ಸ್ಥಿತಿಯ ಚಿತ್ರಣವೂ ಇದೆ.

ಮಕ್ಕಳ ಸಿನಿಮಾ ಅಂದಾಕ್ಷಣ ಅದು ನೀತಿಕತೆಯಂತಿರಬೇಕು ಎನ್ನುವ ನಿಯಮ ಮೀರಿದ್ದೇವೆ. ಇಡೀ ಸಿನಿಮಾ ಭರಪೂರ ಮನರಂಜನೆ ನೀಡುತ್ತದೆ. ಉತ್ತರ ಕರ್ನಾಟಕ ಕಲಾವಿದರೇ ಇದ್ದಾರೆ. ಸಿನಿಮಾ ಸಿನಿಮಾದಂತಿರಬಾರದು, ಪ್ರೇಕ್ಷಕ ಕಥೆಯಲ್ಲಿ ಜೀವಿಸಬೇಕು ಎನ್ನುವ ಉದ್ದೇಶದಿಂದ ನೈಜತೆಗೆ ಒತ್ತು ಕೊಟ್ಟಿದ್ದೇವೆ. ಈಗಾಗಲೇ ಗುರುತಿಸಿಕೊಂಡಿರುವ ಕಲಾವಿದರ್ಯಾರನ್ನೂ ಬಳಸಿಕೊಂಡಿಲ್ಲ’ ಎಂದಿದ್ದಾರೆ.

‘ಈಗಾಗಲೇ ಸಿನಿಮಾ ಪ್ರಚಾರದ ಭಾಗವಾಗಿ ಎರಡು ವೀಡಿಯೋಗಳನ್ನು ಹರಿಯಬಿಟ್ಟಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನನ್ಯಾ ಭಟ್‌ ಧ್ವನಿಯಲ್ಲಿ ಬಿಡುಗಡೆಯಾಗಿರುವ ಹಾಡನ್ನೂ ಹಲವರು ಮೆಚ್ಚಿಕೊಂಡಿದ್ದಾರೆ. ಕನ್ನಡದ ಮಟ್ಟಿಗೆ ಇದು ಹೊಸ ಬಗೆಯ ಪ್ರಯೋಗ’ ಎಂದೂ ವಿರೇನ್‌ ತಿಳಿಸಿದ್ದಾರೆ. ಪ್ರಣೀಲ್ ನಾಡಿಗೇರ್ ಹಾಗೂ ಸಮರ್ಥ ಆಶಿಕ್ ಎಂಬ ಮಕ್ಕಳು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಅಶೋಕ್‌ ಕಶ್ಯಪ್‌ ಈ ಚಿತ್ರದ ಛಾಯಾಗ್ರಾಹಕರು. ಧಾರವಾಡದ ಗ್ರಾಮೀಣ ಪರಿಸರದಲ್ಲಿ ಶೂಟಿಂಗ್‌ ನಡೆದಿದೆ.