ಬಹುನಿರೀಕ್ಷಿತ 'ಕಾಂತಾರ ಅಧ್ಯಾಯ 1' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದು ಏಳು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಬೆಂಗಳೂರು (ಸೆ.22): ಸ್ಯಾಂಡಲ್‌ವುಡ್‌ನಿಂದ ಹೊರಬಂದು ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದ್ದ 'ಕಾಂತಾರ' ಚಿತ್ರದ ಬಹುನಿರೀಕ್ಷಿತ ಪ್ರೀಕ್ವೆಲ್ 'ಕಾಂತಾರ ಅಧ್ಯಾಯ 1' ಚಿತ್ರದ ಟ್ರೇಲರ್ ಇಂದು (ಸೆಪ್ಟೆಂಬರ್ 22) ಮಧ್ಯಾಹ್ನ 12.45ಕ್ಕೆ ಬಿಡುಗಡೆಯಾಗಿದೆ. 2.56 ನಿಮಿಷದ ಈ ಟ್ರೇಲರ್ ಬಿಡುಗಡೆಯಾಗಿದ್ದು, ಬಾಹುಬಲಿ ಸಿನಿಮಾದ ಸೆಟ್‌ನಂತೆ ಧಾರ್ಮಿಕ ಹಿನ್ನೆಲೆಯನ್ನೂ ಹೊಂದಿರುವುದು ಕಂಡುಬರುತ್ತದೆ.
ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ದೇಶದ ಪ್ರಮುಖ ನಟರು ಇದನ್ನು ಅನಾವರಣ ಮಾಡಲಿದ್ದಾರೆ. ಹಿಂದಿಯಲ್ಲಿ ಹೃತಿಕ್ ರೋಶನ್, ತಮಿಳಿನಲ್ಲಿ ಶಿವಕಾರ್ತಿಕೇಯನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ತೆಲುಗಿನಲ್ಲಿ ಪ್ರಭಾಸ್ ಅವರು ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಕನ್ನಡದ ಅಭಿಮಾನಿಗಳಿಂದಲೇ ಕನ್ನಡದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ವಿಶೇಷ.
ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋ ಮತ್ತು ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ, ಮತ್ತು ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಕಾಂತಾರ ಅಧ್ಯಾಯ 1' ಚಿತ್ರವು ಕಲೆ, ಭಕ್ತಿ, ಮತ್ತು ಶಕ್ತಿಯ ಒಂದು ವಿಶಿಷ್ಟ ಮಿಶ್ರಣವಾಗಿದ್ದು, ಕನ್ನಡ ಚಿತ್ರರಂಗದ ಮೂಲಕ ಮತ್ತೊಂದು ಉತ್ತಮ ಗುಣಮಟ್ಟದ ಚಿತ್ರವನ್ನು ವಿಶ್ವದ ಸಿನಿಪ್ರೇಮಿಗಳಿಗೆ ನೀಡಲು ಹೊಂಬಾಳೆ ಫಿಲಂಸ್ ಸಿದ್ಧವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಕರಾವಳಿ ಸಂಸ್ಕೃತಿ, ದೈವದ ಆರಾಧನೆ, ಮತ್ತು ಪ್ರಕೃತಿಯ ಕುರಿತ ಕಥಾನಕದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಇದೀಗ ಅದರ ಕಥೆಯ ಹಿನ್ನೆಲೆಯನ್ನು ಅನಾವರಣಗೊಳಿಸುವ 'ಕಾಂತಾರ ಪ್ರೀಕ್ವೆಲ್' ಕುರಿತು ಕುತೂಹಲ ಹೆಚ್ಚಿದೆ. ಈ ಹಿಂದೆ, ರಿಷಬ್ ಶೆಟ್ಟಿ 'ಕಾಂತಾರ'ದ ಆರಂಭದ ಕಥೆಯನ್ನು ಪ್ರೀಕ್ವೆಲ್ ಮೂಲಕ ಹೇಳುವುದಾಗಿ ಘೋಷಿಸಿದಾಗಿನಿಂದಲೇ ಸಿನಿಮಾ ಬಗೆಗಿನ ನಿರೀಕ್ಷೆ ಗಗನಕ್ಕೇರಿತ್ತು. ಚಿತ್ರತಂಡ ಕಥೆಯ ಬಗ್ಗೆ, ಪಾತ್ರಗಳ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗಿ, ಇಂದಿನ ಟ್ರೇಲರ್ ಯಾವ ರೀತಿಯ ಕಥಾನಕವನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.
'ಹೊಂಬಾಳೆ ಫಿಲಮ್ಸ್' ನಿರ್ಮಿಸಿರುವ ಈ ಚಿತ್ರ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, 'ಕಾಂತಾರ' ದ ಯಶಸ್ಸಿನ ನಂತರ ಈ ಚಿತ್ರವನ್ನು ಮತ್ತೊಂದು ಬೃಹತ್ ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಚಿತ್ರತಂಡ ಟ್ರೇಲರ್ ಬಿಡುಗಡೆ ಸಮಯವನ್ನು ಘೋಷಿಸಿದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಇಂದು ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಇದು 'ಕಾಂತಾರ' ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ. ಒಟ್ಟಿನಲ್ಲಿ, ಅ.2ರಂದು ಬಿಡುಗಡೆಯಾಗುತ್ತಿರುವ 'ಕಾಂತಾರ ಚಾಪ್ಟರ್ 1' ಮತ್ತೆ ಸಿನೆಮಾ ಲೋಕದಲ್ಲಿ ಸಂಚಲನ ಮೂಡಿಸುವುದು ಖಚಿತ.

