'ಕಾಂತಾರ ಚಾಪ್ಟರ್ 1' ಪ್ರಿವ್ಯೂ ಶೋಗೆ ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾವೆಂಬ ವಿಮರ್ಶೆಗಳು ವ್ಯಕ್ತವಾಗಿವೆ. ರಿಷಬ್ ಶೆಟ್ಟಿ ನಟನೆ, ಚಿತ್ರದ ದೃಶ್ಯ ವೈಭವ ಮತ್ತು ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಆಗುವ ಸೂಚನೆ ನೀಡಿದ್ದಾರೆ.
ದಕ್ಷಿಣ ಭಾರತದ ಸಿನಿ ರಸಿಕರು ಕಾತರದಿಂದ ಕಾಯುತ್ತಿರುವ ಸಿನಿಮಾ ಕಾಂತಾರ ಚಾಪ್ಟರ್ 1 ಸದ್ದಿಲ್ಲದೆ ಬಂದು ಸೂಪರ್ ಹಿಟ್ ಆದ ಕಾಂತಾರದ ಪ್ರಿಕ್ವೆಲ್ ಅನ್ನೋದೇ ಇದಕ್ಕೆ ಕಾರಣ. ಕನ್ನಡ ಸಂಸ್ಕೃತಿಗೆ ಸಂಬಂಧಿಸಿದಂತೆ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಈ ಚಿತ್ರ ನಾಳೆ ಅಂದರೆ ಅಕ್ಟೋಬರ್ 2 ರಂದು ಚಿತ್ರಮಂದಿರಗಳಿಗೆ ಬರಲಿದೆ. ರಿಷಬ್ ಸಿನಿಮಾದಲ್ಲಿ ಯಾವ ವಿಸ್ಮಯವನ್ನು ತೋರಿಸಲಿದ್ದಾರೆ ಎಂದು ತಿಳಿಯಲು ಎಲ್ಲ ಸಿನಿ ರಸಿಕರು ಕಾಯುತ್ತಿದ್ದಾರೆ. ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕಾಂತಾರ ಚಾಪ್ಟರ್ 1 ಪ್ರಿವ್ಯೂ ಶೋನ ವಿಮರ್ಶೆ ಹೊರಬಿದ್ದಿದೆ.
ಕಾಂತಾರ ಚಾಪ್ಟರ್ 1 ನಿರೀಕ್ಷೆಯನ್ನು ಉಳಿಸಿಕೊಂಡಿದೆ ಎಂದು ಟ್ವಿಟರ್ ವಿಮರ್ಶೆಗಳಿಂದ ಸ್ಪಷ್ಟವಾಗಿದೆ. ಮೊದಲ ಭಾಗದಂತೆಯೇ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರಿಗೆ ಅದ್ಭುತ ದೃಶ್ಯ ವೈಭವ ಮತ್ತು ಅನುಭವ ಕಾದಿದೆ ಎಂದು ವಿಮರ್ಶೆಗಳು ಸೂಚಿಸುತ್ತವೆ. ಕಾಂತಾರ ಪ್ರಿಕ್ವೆಲ್ ಬ್ಲಾಕ್‌ಬಸ್ಟರ್ ಆಗಲಿದ್ದು, ರಿಷಬ್ ಶೆಟ್ಟಿ ಅವರ ಅದ್ಭುತ ನಟನೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ.
ಸಿನಿಮಾಗೆ 4.5/5 ಸ್ಕೋರ್ ಕೊಟ್ಟ ಪ್ರಿವ್ಯೂ ಪ್ರೇಕ್ಷಕ:
ಕಾಂತಾರ ಚಾಪ್ಟರ್ 1 ಒಂದು ಪೀಕ್ ಸಿನಿಮಾಟಿಕ್ ಅನುಭವ. ಅದರಲ್ಲೂ ಸೆಕೆಂಡ್ ಹಾಫ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರಿಸಿದ್ದಾರೆ. ಸ್ಕೋರ್ 4.5/5 ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಮತ್ತೆ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಚಿತ್ರ ಕೇವಲ ಮನರಂಜನೆ ನೀಡುವುದಲ್ಲ, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಇಳಿಯುತ್ತದೆ. ರೋಮಾಂಚನಗೊಳಿಸುವ ಕ್ಷಣಗಳು ಸಾಕಷ್ಟಿವೆ. 10 ನಿಮಿಷದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ' ಎಂದು ಮತ್ತೊಬ್ಬರು ವಿಮರ್ಶಿಸಿದ್ದಾರೆ.
ಮೊದಲ ಫ್ರೇಮ್‌ನಿಂದ ಕೊನೆಯವರೆಗೂ, ಕಾಂತಾರ ದೃಶ್ಯ ವೈಭವದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ, ಕಾಂತಾರ ಚಾಪ್ಟರ್ 1 ಪ್ರಿವ್ಯೂ ಶೋಗಳಿಗೆ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಈ ಸಿನಿಮಾಗೆ ಪ್ರೀಮಿಯರ್ ನೋಡಿದ ಪ್ರೇಕ್ಷಕರು 10ಕ್ಕೆ 9+ ಅಂಕಗಳನ್ನು ನೀಡಿದ್ದಾರೆ.
ಕಾಂತಾರ ಅಧ್ಯಾಯ 1 ಒಂದು ಸಿನಿಮೀಯ ಅನುಭವವಾಗಿದ್ದು, ಇದು ಪುರಾಣ, ಸಂಸ್ಕೃತಿ ಮತ್ತು ಕಚ್ಚಾ ಕಥೆ ಹೇಳುವಿಕೆಯನ್ನು ದೃಶ್ಯವಾಗಿ ಸೆರೆಹಿಡಿಯುವ ದೃಶ್ಯವಾಗಿ ಸಂಯೋಜಿಸುತ್ತದೆ. ಅದರ ವಾತಾವರಣದ ವಿಶ್ವ ನಿರ್ಮಾಣದಿಂದ ಹಿಡಿದು ರಿಷಬ್ ಶೆಟ್ಟಿಯವರ ಪ್ರಬಲ ನಿರ್ದೇಶನದವರೆಗೆ, ಪ್ರತಿಯೊಂದು ಚೌಕಟ್ಟು ಉದ್ದೇಶಪೂರ್ವಕ ಮತ್ತು ತಲ್ಲೀನಗೊಳಿಸುವಂತಿದೆ. ಈ ಚಿತ್ರವು ಕೇವಲ ಮನರಂಜನೆ ನೀಡುವುದಲ್ಲದೆ, ಆಕರ್ಷಕವಾಗಿದೆ. ಧ್ವನಿ ವಿನ್ಯಾಸ, ಛಾಯಾಗ್ರಹಣ ಮತ್ತು ಪ್ರದರ್ಶನದ ಚಾಕಚಕ್ಯತೆ ಸಿನಿಮಾವನ್ನು ಪ್ರಾದೇಶಿಕ ಗಡಿ ಮೀರಿ ಎತ್ತರಿಸುತ್ತದೆ. ಜಾಗತಿಕ ಸಿನಿಮಾದ ಸಾಲಿನಲ್ಲಿ ಕಾಂತಾರವನ್ನು ದೃಢವಾಗಿ ಇರಿಸುತ್ತದೆ.
ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಎಲ್ಲ ಪಾತ್ರಗಳೂ ಕೂಡ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಕಾಂತಾರ ಚಾಪ್ಟರ್ 1 ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಾಳೆ ಬೆಂಗಳೂರು ನಗರದಲ್ಲಿಯೇ ಒಂದೇ ದಿನದಲ್ಲಿ 1000ಕ್ಕೂ ಅಧಿಕ ಪ್ರದರ್ಶನಗಳು ಕಾಂತಾರ ಸಿನಿಮಾದ ಪಾಲಾಗಲಿವೆ. ಈ ಮೂಲಕ ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕನ್ನಡ ಸಿನಿಮಾವೊಂದು ಒಂದೇ ದಿನದಲ್ಲಿ ಸಾವಿರ ಪ್ರದರ್ಶನಗಳನ್ನು ಮೀರಿಸಿದ ಸಿನಿಮಾವಾಗಲಿದೆ.
ಬೆಂಗಳೂರು, ಉಡುಪಿಯಲ್ಲಿ ಹೌಸ್‌ಫುಲ್ ಪ್ರೀಮಿಯರ್:
ನಮ್ಮ ರಾಜ್ಯದಲ್ಲಿ ಬೆಂಗಳೂರಿನ ಒರಾಯನ್ ಮಾಲ್‌ನ 7 ಸ್ಕ್ರೀನ್‌ಗಳು ಹಾಗೂ, ದಾವಣಗೆರೆ 4 ಕಡೆ ಹಾಗೂ ಉಡುಪಿಯಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇಲ್ಲಿ ಪ್ರೀಮಿಯರ್ ಶೋನ ಟಿಕೆಟ್‌ಗಳು ಕೂಡ ಸಿಗದೇ ಕೆಲವರು ವಾಪಸಾಗಿದ್ದಾರೆರ. ಎಲ್ಲ ಸ್ಕ್ರೀನ್‌ಗಳು ಕೂಡ ಹೌಸ್‌ಫುಲ್ ಆಗಿದ್ದವು, ಇದೀಗ ಅವರಿಂದ ವಿಮರ್ಶೆಯೂ ಬಂದಿದ್ದು, ನಿಮ್ಮ ನಿರೀಕ್ಷೆಗಳನ್ನು ಸುಳ್ಳು ಮಾಡಲ್ಲ. ನೀವು ನಿರೀಕ್ಷೆ ಇಟ್ಟುಕೊಳ್ಳದೇ ಹೋದರೆ ನೂರಕ್ಕೆ ನೂರು ಉತ್ತಮ ಮನರಂಜನೆ ಎಂದು ಹೇಳಿದ್ದಾರೆ.
