Dr Vishnuvardhan Abhiman Studio: ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ ಜಾಗವನ್ನು ಸರ್ಕಾರ ಈಗ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿದೆ. ಈ ಮೂಲಕ ಬಾಲಣ್ಣ ಕುಟುಂಬಕ್ಕೆ ಹಿನ್ನಡೆಯಾಗಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಏನಂದ್ರು? 

ಬೆಂಗಳೂರಿನ ಹೊರವಲಯದಲ್ಲಿರುವ‌ ಅಭಿಮಾನ್‌ ಸ್ಟುಡಿಯೋದಲ್ಲಿ 2009ರಲ್ಲಿ ಡಾ ವಿಷ್ಣುವರ್ಧನ್‌ ಅಂತ್ಯಕ್ರಿಯೆ ಮಾಡಲಾಗಿತ್ತು. ಕೆಲವೇ ದಿನಗಳ ಹಿಂದೆ ಅಲ್ಲಿದ್ದ ಸಮಾಧಿಯನ್ನು ನೆಲಸಮ ಮಾಡಲಾಗಿತ್ತು. ಬಾಲಣ್ಣ ಕುಟುಂಬಕ್ಕೆ ಸೇರಿದ್ದ ಈ ಜಾಗವನ್ನು ಸರ್ಕಾರ ಈಗ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಏನು ಹೇಳಿದ್ದಾರೆ?

ಮಾಲ್‌ ಕಟ್ಟೋಕೆ ರೆಡಿಯಾಗಿದ್ರು!

ಬಾಲಕೃಷ್ಣ ಅವರ ಕುಟುಂಬ ಮಾಲ್‌ ಕಟ್ಟೋಕೆ ಮುಂದಾಗಿದ್ದು ನಿಜ. ಆದರೆ ಇದಕ್ಕೆ ಸರ್ಕಾರ ಬ್ರೇಕ್‌ ಹಾಕಿರೋದು ಸತ್ಯ. ಈಗ ಇಲ್ಲಿ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಕಟ್ಟಡ ಕಟ್ಟೋಕೆ ಅವಕಾಶವೇ ಇಲ್ಲ, ಆದರೆ ಇಲ್ಲಿ ಡಾ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ಆಗಿದೆ, ಜನರಿಗೆ ಇಲ್ಲಿ ಭಾವನಾತ್ಮಕ ನಂಟಿದೆ, ಹೀಗಾಗಿ ನಾವು ಅಲ್ಲಿ 10 ಗುಂಟೆ ಜಾಗ ಕೇಳ್ತಿದ್ದೇವೆ. ಬಾಲಣ್ಣ ಅವರ ಕುಟುಂಬದ ಬಗ್ಗೆ ಸಾಕಷ್ಟು ಗೌರವ ಇದೆ. ಆ ಜಾಗದಲ್ಲಿ ಅಭಿವೃದ್ಧಿ ಆಗಿದ್ರೆ ಚೆನ್ನಾಗಿರುತ್ತಿತ್ತು. ಅಲ್ಲಿ ವಿಷ್ಣುವರ್ಧನ್ ಸಮಾಧಿಗೆ ಅವಕಾಶ ಕೊಟ್ಟಿದ್ದರು‌, ಅವರಿಗೂ ಗೌರವ ಇರ್ತಿತ್ತು. ಈಗ ಸರ್ಕಾರ ಮುಟ್ಟುಗೋಲು ಹಾಕಿಕೊಳ್ತಿದೆ

10 ಗುಂಟೆ ಜಾಗ ಬೇಕು!

ಸರ್ಕಾರ ಮುಟ್ಟುಗೋಲು ಹಾಕಿರೋದರ ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ, ಈಗ ಬಂದಿದೆ. ವಿಷ್ಣುವರ್ಧನ್‌ ಸಮಾಧಿಗೆ ಕೇವಲ 10 ಗುಂಟೆ ಜಾಗ ಕೇಳ್ತಿವಿ ಅಲ್ಲಿ ಮಂಟಪ ಕಟ್ಟಲಾಗುತ್ತದೆ. ಅಭಿಮಾನಿಗಳು ಇಡೀ ವರ್ಷ ಬಂದು ಹೋಗಲು, ಪೂಜೆ ಸಲ್ಲಿಸಲು, ಸ್ಮರಣೆ ಮಾಡಲು ಅವಕಾಶ ಕೇಳಿದ್ದೇವೆ.

ಕರ್ನಾಟಕ ರತ್ನ ಸಿಗಬೇಕು

ಸಿಎಂ ಭೇಟಿ ಆದಾಗ ಈ ಬಗ್ಗೆ ಸೂಚನೆ ಸಿಕ್ಕಿರಲಿಲ್ಲ. ನಾನು ಏನು ಹೇಳ್ತಿದಿನೋ ಅದನ್ನು ಭಾರತಿ ಅಮ್ಮ ಕೂಡ ಹೇಳ್ತಿದ್ದಾರೆ. ಕಳೆದ ಬಾರಿ ಸಿಎಂ ಭೇಟಿ ಹೋದಾಗಲೂ ಈ ಬಾರಿಯೂ ಕೂಡ ವಿಷ್ಣುವರ್ಧನ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಭಿನ್ನಾಭಿಪ್ರಾಯ ಇರುವ ಅಭಿಮಾನಿಗಳು ಅಭಿಮಾನಿಗಳಲ್ಲ, ನಿಜವಾದ ಅಭಿಮಾನಿಗಳು ಮಾತ್ರ ನಮ್ಮ ಜೊತೆ ಸದಾ ಇದ್ದಾರೆ.

ಇಲ್ಲಿ ಪ್ರತಿಯೊಬ್ಬ ಅಭಿಮಾನಿಗಳು ಜೊತೆಯಲ್ಲಿ ಇರುತ್ತಾರೆ. ಅವರವರ ಬಡಾವಣೆಯಲ್ಲೂ ಅಪ್ಪಾಜಿಯ ಪ್ರತಿಮೆ ಇಟ್ಟು ಪೂಜೆ ಮಾಡ್ತಿದಾರೆ. ಅಭಿಮಾನ್ ಸ್ಟುಡಿಯೋ ತುಂಬಾ ವಿಶೇಷ ಹಾಗಾಗಿ ಅದಕ್ಕಾಗಿ ಅಭಿಮಾನಿಗಳ ಜೊತೆ ಇರ್ತಿವಿ. ಇನ್ನು ಡಾ ವಿಷ್ಣುವರ್ಧನ್‌ ಅವರ 75ನೇ ಜನ್ಮದಿನದಂದು ಅಭಿಮಾನ್‌ ಸ್ಟುಡಿಯೋ ಬಳಿ ಸ್ಮಾರಕ ಕಟ್ಟಲು ಅಡಿಪಾಯ ಹಾಕುವ ಆಶಯವಿದೆ. ಮೈಸೂರಿನಲ್ಲಿ ಸ್ಮಾರಕ ಆಗಲು ತುಂಬ ಕಷ್ಟ ಪಟ್ಟಿದ್ದೇವೆ, ಇಲ್ಲಿ ಕೂಡ ಸ್ಮಾರಕ ಆಗಲು ಒದ್ದಾಡಿದ್ದೇವೆ. ನಮ್ಮ ಹಾಗೂ ಅಭಿಮಾನಿಗಳ ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಪಡುವವರು ನಿಜಕ್ಕೂ ವಿಷ್ಣುವರ್ಧನ್‌ ಅಭಿಮಾನಿಗಳಲ್ಲ, ಅಂಥವರಿಂದ ಅಭಿಮಾನಿಗಳು ದಯವಿಟ್ಟು ದೂರ ಇರಬೇಕು.