Dr Vishnuvardhan Family: ನಟ ವಿಷ್ಣುವರ್ಧನ್ ಅವರು ಮೊಮ್ಮಕ್ಕಳ ಜೊತೆ ಸಮಯ ಕಳೆದಿರುವ ಅಪರೂಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕನ್ನಡ ಚಿತ್ರರಂಗದ ಮೇರುನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ, ಸಮಾಧಿ ವಿಚಾರವಾಗಿ ಪ್ರತಿಭಟನೆ, ಚರ್ಚೆ ನಡೆಯುತ್ತಿದೆ. ಇನ್ನೊಂದು ಕಡೆ ಮೊಮ್ಮಕ್ಕಳ ಜೊತೆ ಆಟ ಆಡ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಿಡಿಯೋದಲ್ಲಿ ಏನಿದೆ?
ಪತ್ರಕರ್ತ ಜನಾರ್ಧನ್ ರಾವ್ ಸಾಲಂಕೆ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಷ್ಣು ಅವರ ಅಪರೂಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರ ಮೊಮ್ಮಕ್ಕಳಾದ ಜ್ಯೇಷ್ಠವರ್ಧನ್, ಶ್ಲೋಕ ಜೊತೆಗೆ ಇದ್ದಾರೆ. ಜನಾರ್ಧನ್ ರಾವ್ ಅವರು ಒಂದು ಆಲ್ಬಮ್‌ನ್ನು ವಿಷ್ಣು ಅವರಿಗೆ ನೀಡುತ್ತಾರೆ. ಅದನ್ನು ಅವರು ನೋಡುತ್ತಿದ್ದಾಗ ಮೊಮ್ಮಗ ಬಂದು ನಾನು ನೋಡ್ತೀನಿ ಎಂದು ಕಾಟ ಕೊಡ್ತೀನಿ. ಆಗ ವಿಷ್ಣು ಅವರು ಜ್ಯೇಷ್ಠ ನೋಡೋಕೆ ಬಿಡು ಅಂತ ಹೇಳುತ್ತಾರೆ. ಆಮೇಲೆ ತಾತನ ತೊಡೆಯ ಮೇಲೆ ಕೂತು ಮೊಮ್ಮಗ ಆಲ್ಬಮ್ ನೋಡುತ್ತಾನೆ. ಇನ್ನು ಮೊಮ್ಮಗಳು ಶ್ಲೋಕ ಜೊತೆ ಕೂಡ ಅವರು ಮಾತನಾಡುತ್ತಾರೆ. ಒಟ್ಟಾರೆಯಾಗಿ ಎರಡೂವರೆ ಗಂಟೆಗಳ ಕಾಲ ಅಂದು ಸಂದರ್ಶನ ನಡೆದಿತ್ತಂತೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನಿಜಕ್ಕೂ ಭಾವುಕರಾಗಿದ್ದಾರೆ.
ಪತ್ರಕರ್ತ ಜನಾರ್ಧನ್ ರಾವ್ ಹೇಳಿದ್ದೇನು?
"ನಿಮ್ಮ ನೆನಪು ಸದಾ ಅಚ್ಚ ಹಸಿರು......ಸಾಹಸ ಸಿಂಹ, ಅಭಿನವ ಭಾರ್ಗವ, ಮೈಸೂರು ರತ್ನ, ಮಹಾ ಪುರುಷ, ಯಜಮಾನ, ಕೋಟಿಗೊಬ್ಬ, ಜ್ಯೇಷ್ಠ ಡಾ.ವಿಷ್ಣುವರ್ಧನ್ ರವರನ್ನು ನೋಡುವುದೇ ಒಂದು ಸೌಭಾಗ್ಯ. ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಕುಳಿತು ಮಾತು ಕತೆ ನಡೆಸಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಸರಳ ವ್ಯಕ್ತಿತ್ವ, ನಿಷ್ಕಲ್ಮಶ ಮನಸ್ಸು, ಮಗುವಿನಂತಹ ಮುಗುಳ್ನಗೆ, ಸದಾ ಪರರ ಹಿತಕ್ಕಾಗಿ ಚಿಂತಿಸುವ ಸಿರಿವಂತ, ದೈವೀಕ ಪ್ರಭಾವಳಿ ಹೊಂದಿದ್ದ ಯಜಮಾನ, ಬಡವರಿಗೆ ಮತ್ತು ಹಿರಿಯರಿಗೆ ಸದಾ ಸಹಾಯ ಮಾಡುವ ಹೃದಯವಂತ, ನಮ್ಮೆಲ್ಲರ ಪ್ರೀತಿಯ ದಾದಾರವರಿಗೆ ಮುಂಚಿತವಾಗಿ 75ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ನಿಮ್ಮ ಪ್ರೀತಿಯ, ಜನಾರ್ಧನ ರಾವ್ ಸಾಳಂಕೆ”ಎಂದು ವಿಡಿಯೋ ಸಮೇತ ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಅಭಿಮಾನಿಯೋರ್ವರು “ಅವರ ಹೃದಯ ಹೇಗಿದೆಯೋ ಹಾಗೆ ಅವರು ಕೂಡ ಅಷ್ಟೇ ಸರಳವಾಗಿ ಎಷ್ಟು ಸಿಂಪಲ್ ಆಗಿ ಹೊರಗೆ ಕುತ್ಕೊಂಡು ಮಕ್ಕಳ್ಳ ಜೊತೆ ಆಡ್ಕೊಂಡು ನೋಡೋಕ್ಕೆ ಎಷ್ಟು ಚಂದ. ವಿಷ್ಣುವರ್ಧನ್ ಸರ್ ಇವು ಇನ್ನು ಇರ್ಬೇಕಿತ್ತು ಅನಿಸುತ್ತದೆ” ಎಂದಿದ್ದಾರೆ.
ಸಂಪತ್‌ಕುಮಾರ್ ಇಂದಿನ ವಿಷ್ಣುವರ್ಧನ್!
ಡಾ ವಿಷ್ಣುವರ್ಧನ್ ಮೊದಲ ಹೆಸರು ಸಂಪತ್ ಕುಮಾರ್, 1950ರ ಸೆಪ್ಟೆಂಬರ್ 18ರಂದು ಮೈಸೂರಿನ ಚಾಮುಂಡಿಪುರಂನಲ್ಲಿ ಜನಿಸಿದರು. ಅವರ ತಂದೆ ಎಚ್ ಎಲ್ ನಾರಾಯಣ ರಾವ್ ಕೂಡ ಕಲಾವಿದರು, ಸ್ಕ್ರೀನ್‌ಪ್ಲೇ ಬರೆಯುತ್ತಿದ್ದರು, ಸಂಗೀತ ಸಂಯೋಜಕ ಕೂಡ ಹೌದು. ವಿಷ್ಣುವರ್ಧನ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜು, ಬಸವನಗುಡಿಯಲ್ಲಿ ಪದವಿ ಪಡೆದರು.
1975ರ ಫೆಬ್ರವರಿ 27ರಂದು ಬೆಂಗಳೂರಿನ ಕುಚಲಂಬ ಕಲ್ಯಾಣ ಮಂಟಪದಲ್ಲಿ ಡಾ ವಿಷ್ಣುವರ್ಧನ್ ಅವರು ನಟಿ ಭಾರತಿಯನ್ನು ಮದುವೆಯಾದರು. ವಿಷ್ಣುವರ್ಧನ್, ಭಾರತಿ ಒಟ್ಟಾಗಿ 'ಭಾಗ್ಯ ಜ್ಯೋತಿ', 'ಮಕ್ಕಳ ಭಾಗ್ಯ', 'ದೇವರ ಗುಡಿ', 'ನಗರ ಹೊಳೆ' ಮತ್ತು 'ಬಂಗಾರದ ಜಿಂಕೆ'ಯಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರು ಭಾರತಿ ಸಂಬಂಧಿಕರಿಂದ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದರು. ನಟ ಅನಿರುದ್ಧ ಜತ್ಕರ್ ಜೊತೆ ಕೀರ್ತಿ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ ( ಜ್ಯೇಷ್ಠವರ್ಧನ್, ಶ್ಲೋಕ )
ವಿಷ್ಣುವರ್ಧನ್ ಅವರು ಆಧ್ಯಾತ್ಮಿಕ ಒಲವನ್ನು ಹೊಂದಿದ್ದರು. ಧರ್ಮದಲ್ಲಿ ದೃಢವಾದ ನಂಬಿಕೆಯನ್ನು ಇಟ್ಟುಕೊಂಡಿದ್ದು, ಗುರು ರಾಘವೇಂದ್ರ ಸ್ವಾಮಿಯ ಬಗ್ಗೆ ವಿಶೇಷ ಭಕ್ತಿ ಇಟ್ಟುಕೊಂಡಿದ್ದರು. ದೇವಾಲಯಗಳಿಗೆ ಭೇಟಿ ನೀಡುತ್ತ, ಮನೆಯಲ್ಲಿ ಪೂಜೆ ಮಾಡುತ್ತಿದ್ದರು. 1980ರಿಂದ ಅವರು ಬೀದರ್‌ನ ಗುರುದ್ವಾರದಲ್ಲಿ ಪಡೆದ ಕಡಾವನ್ನು ಕೊನೇತನಕ ಧರಿಸಿದ್ದರು.
2009ರ ಡಿಸೆಂಬರ್ 30ರಂದು ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ನಿಧನರಾದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ರಾಜ್ಯ ಸರ್ಕಾರದ ಗೌರವದ ಜೊತೆಯಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು.

