Darshan Thoogudeepa Bail Suspend: ಚಿತ್ರದುರ್ಗ ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಅವರ ಜಾಮೀನು ರದ್ದಾಗಿದೆ. ಈ ಬಗ್ಗೆ ರಮ್ಯಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊ*ಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಸೇರಿ 7 ಜನ ಆರೋಪಿಗಳ ಜಾಮೀನು ( Darshan Thoogudeepa Bail Suspend ) ರದ್ದಾಗಿದೆ. ಮೊದಲಿನಿಂದಲೂ ನಟಿ ರಮ್ಯಾ ಅವರು ಈ ಕೇಸ್ ವಿಚಾರವಾಗಿ ದರ್ಶನ್ ವಿರೋಧಿಸುತ್ತಲೇ ಬಂದಿದ್ದರು. ಈಗ ಜಾಮೀನು ರದ್ದಾಗುತ್ತಿದ್ದಂತೆ ಪೋಸ್ಟ್ ಹಂಚಿಕೊಂಡಿದ್ದಾರೆ.
ರಮ್ಯಾ ಪೋಸ್ಟ್ ಏನು?
“ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಇಂದು ಬಲವಾದ ಸಂದೇಶವನ್ನು ರವಾನಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಉಳಿದವರಿಗೆ ನಾನು ಹೇಳುವುದೇನೆಂದರೆ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿ, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯವು ಸಿಗುತ್ತೆ.ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಇರಿ” ಎಂದು ರಮ್ಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ತಕ್ಷಣ ಬಂಧಿಸುವಂತೆ ಆದೇಶ!
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾ. ಮಹದೇವನ್ ತೀರ್ಪು ಪ್ರಕಟಿಸಿದ್ದು, ತಕ್ಷಣ ಏಳು ಜನರನ್ನು ಬಂಧಿಸುವಂತೆ ಆದೇಶಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರಿಗೆ ಐಷಾರಾಮಿ ಸೌಲಭ್ಯ ನೀಡಲಾಗಿತ್ತು, ಅವರು ಆರಾಮಾಗಿ ಉಳಿದ ರೌಡಿಗಳ ಜೊತೆ ಕೂತಿದ್ದ ಫೋಟೋ ಕೂಡ ವೈರಲ್ ಆಗಿತ್ತು. ಐಷಾರಾಮಿಯಾಗಿ ಅಲ್ಲಿರಲು ಸಹಾಯ ಮಾಡಿದ್ದ ಜೈಲಾಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಎಂದು ಕೂಡ ಆದೇಶ ನೀಡಲಾಗಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ!
ನಟಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರು ಫೇಕ್ ಅಕೌಂಟ್ ಮಾಡಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಹೀಗಾಗಿ ದರ್ಶನ್ ಅವರು ತಮ್ಮ ಗ್ಯಾಂಗ್ ಸಹಾಯದಿಂದ ಪಟ್ಟಣಗೆರೆ ಶೆಡ್‌ಗೆ ಕರೆಸಿ, ಸಾಯುವಂತೆ ಹೊಡೆಸಿದ್ದರು ಎನ್ನಲಾಗಿದೆ. ಹೀಗಾಗಿ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಈ ಕೇಸ್‌ನಲ್ಲಿ ದರ್ಶನ್‌ಗೆ ಜಾಮೀನು ಮಂಜೂರು ಮಾಡಿ ಎಂದು ಕರ್ನಾಟಕ ಹೈಕೋರ್ಟ್ ಡಿಸೆಂಬರ್ 13, 2024 ರಂದು ಮನವಿ ಮಾಡಿತ್ತು. ಆ ಜಾಮೀನು ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಹೀಗಾಗಿ ಕರ್ನಾಟಕ ಸರ್ಕಾರಕ್ಕೆ ಗೆಲುವು ಸಿಕ್ಕಿದೆ.
ಜೂನ್ 2024 ರಲ್ಲಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಎನ್ನುವವರನ್ನು ಅಪಹರಿಸಿ ಬೆಂಗಳೂರಿನ ಶೆಡ್‌ನಲ್ಲಿ 3 ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದರು. ದೌರ್ಜನ್ಯಕ್ಕೆ ಆ ವ್ಯಕ್ತಿ ಸಾವನ್ನಪ್ಪಿದ್ದು, ಆ ಮೃತದೇಹವನ್ನು ಚರಂಡಿಗೆ ಎಸೆಯಲಾಗಿತ್ತು. ಆ ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿರೋದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಪೊಲೀಸರು ಇನ್ನಷ್ಟು ತನಿಖೆ ಮಾಡಿದ ಬಳಿಕ ಕೊಲೆ ವಿಷಯ ರಿವೀಲ್ ಆಗಿತ್ತು. ದರ್ಶನ್, ಪವಿತ್ರಾ ಗೌಡ, ಅನು ಕುಮಾರ್, ಲಕ್ಷ್ಮಣ್ ಎಂ, ಪ್ರದೂಷ್ ಎಸ್ ರಾವ್, ವಿ ವಿನಯ್, ಜಗದೀಶ್, ನಾಗರಾಜು ಆರ್ ಅವರು ಸೇರಿ ಒಟ್ಟೂ 11 ಜನರನ್ನು ಬಂಧಿಸಲಾಗಿತ್ತು.
