ಕಾಂತಾರಾ 1 ಸಿನಿಮಾ ವೀಕ್ಷಣೆ ವೇಳೆ ಬಾಲಕಿ ಮೈಮೇಲೆ ಬಂದ ದೈವ, ಬೆಚ್ಚಿ ಬಿದ್ದ ಪೋಷಕರು, ಬಾಲಕಿಯನ್ನು ಪೋಷಕರು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ, ಆವೇಶದ ವರ್ತನೆ ನೋಡಿ ಸಿನಿಮಾ ಪ್ರೇಕ್ಷಕರು ಗಾಬರಿಯಾದ ಘಟನೆ ನಡೆದಿದೆ.

ಚಾಮರಾಜನಗರ (ಅ.05) ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಇದೇ ವೇಳೆ ಸಿನಿಮಾ ಥಿಯೇಟರ್, ಸಾರ್ವಜನಿಕ ವೇದಿಕೆಗಳಲ್ಲಿ ತುಳುನಾಡಿನ ಆರಾಧ್ಯ ದೈವಗಳ ನಂಬಿಕೆ, ಪದ್ಧತಿ, ಆಚಾರವನ್ನೇ ಅಣಕಿಸುವ ಪ್ರಯತ್ನಗಳು ನಡೆಯುತ್ತಿದೆ. ಹಲವು ಪಂಜುರ್ಲಿ ಸೇರಿದಂತೆ ಇತರ ದೈವಗಳ ವೇಷ ಧರಿಸಿ ಜನರ ಗಮನಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆಗಳ ವಿರುದ್ಧ ಭೂತಾರಾಧನೆ ನಂಬುತ್ತಿರುವ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಕಾಂತಾರಾ 1 ಸಿನಿಮಾ ವೀಕ್ಷಿಸುತ್ತಿದ್ದಬಾಲಕಿಯೊಬ್ಬ ಮೈಮೇಲೆ ದೈವಾಹನೆಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಕುಟುಂಬ ಸಮೇತ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಬಾಲಕಿ

ಚಾಮರಾಜನಗರ ಜಿಲ್ಲೆ ಯಳಂದೂರಿನ ಮಹದೇಶ್ವರ ಚಿತ್ರಮಂದಿರದಲ್ಲಿ ಬಾಲಕಿ ಹಾಗೂ ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಸಿನಿಮಾದಲ್ಲಿ ದೈವದ ದೃಶ್ಯ ಕಂಡು ದೈವಾವೇಶದ ರೀತಿ‌ಯಲ್ಲಿ ಬಾಲಕಿ ವರ್ತಿಸಿದೆ. ಈ ವೇಳೆ ಪೋಷಕರು ಸೇರಿದಂತೆ ಪಕ್ಕದಲ್ಲಿದ್ದ ಸಿನಿಮಾ ಪ್ರೇಕ್ಷಕರು ಬಾಲಕಿಯನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಮೂರು-ನಾಲ್ಕು ಮಂದಿ ಬಾಲಕಿಯನ್ನು ಹಿಡಿದರೂ ಆವೇಶ ನಿಲ್ಲಿಸಲು ಸಾಧ್ಯವಾಗಿಲ್ಲ.

ಪೋಷಕರು ಗಾಬರಿ, ಪ್ರೇಕ್ಷಕರಿಗೆ ಅಚ್ಚರಿ

ಬಾಲಕಿಯ ದೈವಾವೇಶದ ವರ್ತನೆ ಕಂಡು ಪೋಷಕರು ಗಾಬರಿಯಾಗಿದ್ದಾರೆ. ಬಾಲಕಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಲಾಗಿದೆ. ಬಾಲಕಿಯ ಅಜ್ಜಿ ನೀರು ಚಿಮುಕಿಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಕೆಲಕಾಲ ಆವೇಶ ಭರಿತಳಾಗಿದ್ದ ಬಾಲಕಿ ಬಳಿಕ ಸಹಜ ಸ್ಥಿತಿಗೆ ಮರಳಿದ್ದಾಳೆ. ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಬಾಲಕಿ ಅಸ್ವಸ್ಥಗೊಂಡಿದದಾಳೆ.

ಬಾಲಕಿಯ ದೈವಾವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲೆವೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ದೈವ, ಭೂತಾರಾಧನೆಯನ್ನು ತೆರೆಮೇಲೆ ತಂದು ಜಗತ್ತಿಗೆ ನಂಬಿಕೆ ಹಾಗೂ ಧರ್ಮ, ಸಂಸ್ಕಾರಗಳ ಕುರಿತು ಪರಿಚಯಿಸಿದ್ದಾರೆ. ಆದರೆ ಹಲವರು ಪ್ರಚಾರಕ್ಕಾಗಿ, ಗಮನಸೆಳೆಯಲು ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಅನ್ನೋ ಆರೋಪ, ಆಕ್ರೋಶಗಳು ಕೇಳಿಬರುತ್ತಿದೆ. ಇದು ತುಳುನಾಡಿನ ಜನರ ನಂಬಿಕೆಯನ್ನೇ ಪ್ರಶ್ನೆ ಮಾಡುವಂತಿದೆ. ಜೊತೆಗೆ ಆರಾಧಾನ ಪದ್ಧತಿಯನ್ನು ಅಣಕಿಸುವಂತಿದೆ ಎಂದು ಆಕ್ರೋಶಗಳು ವ್ಯಕ್ತವಾಗಿದೆ.

ಕಾಂತಾರಾ ಚಾಪ್ಟರ್ 1 ಸಿನಿಮಾ ದಾಖಲೆ

ಕಾಂತಾರಾ ಚಾಪ್ಟರ್ 1 ಸಿನಿಮಾ, ಕಾಂತಾರಾ ಸಿನಿಮಾದ ಪ್ರೀಕ್ವೆಲ್ ಸಿನಿಮಾ ಆಗಿ ತೆರೆ ಮೇಲೆ ಬಂದಿದೆ. ಕಾಂತಾರಾ ಸಿನಿಮಾದಲ್ಲಿದ್ದ ದೈವ, ದೇವರು, ನಂಬಿಕೆ, ಪ್ರಕೃತಿ ಜೊತೆಗೆ ಕದಂಬರ ಕಾಲದ ಕತೆಯನ್ನು ಹೇಳುತ್ತಿದೆ. ಕಾಂತಾರಾ 1 ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಿದೆ. ಇದೀಗ ನಾಲ್ಕು ದಿನ ಪೂರೈಸಿದೆ. ಅಷ್ಟರಲ್ಲೇ 235 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಹಲವು ಸಿನಿಮಾಗಳ ದಾಖಲೆ ಪುಡಿ ಮಾಡಿದೆ. ದೇಶಾದ್ಯಂತ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾವನ್ನು ದೇಶದ ಎಲ್ಲಾ ಭಾಗದ ಜನರು ಮೆಚ್ಚಿಕೊಂಡಿದ್ದಾರೆ. ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತ ಕಾಂತಾರ ಸಿನಿಮಾ ತಂಡ ದೆಹಲಿಯಲ್ಲಿ ಸಕ್ಸಸ್ ಮೀಟ್ ಆಯೋಜಿಸಿದೆ. ಇಷ್ಟೇ ಅಲ್ಲ ರಾಷ್ಟ್ರಪತಿ ಭವನದಲ್ಲಿ ಕಾಂತಾರಾ ಚಾಪ್ಟರ್1 ಸಿನಿಮಾ ಸ್ಕ್ರೀನಿಂಗ್ ಮಾಡಲಾಗಿದೆ. ಹಂತ ಹಂತದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಹಲವು ದಾಖಲೆ ಬರೆಯುತ್ತಿದೆ. ಜೊತೆಗೆ ಗಣ್ಯರಿಂದ ಭಾರಿ ಪ್ರಶಂಸೆಗೆ ಕಾರಣವಾಗುತ್ತಿದೆ.