ಅ.5ಕ್ಕೆ ಕಾಂತಾರಾ 1 ಸಕ್ಸಸ್ ಮೀಟ್, ರಿಷಬ್ ಶೆಟ್ಟಿ ಭೇಟಿಯಾಗಲು ಫ್ಯಾನ್ಸ್‌ಗೆ ಅವಕಾಶ ನೀಡಲಾಗಿದೆ. ಫ್ಯಾನ್ಸ್, ಮಾಧ್ಯಮಗಳ ಜೊತೆ ರಿಷಬ್ ಶೆಟ್ಟಿ ಮಾತನಾಡಲಿದ್ದಾರೆ. ಇತ್ತ ಭರ್ಜರಿ ಕಲೆಕ್ಷನ್ ಮಾಡುತ್ತಾ ಸಾಗುತ್ತಿರುವ ಕಾಂತಾರಾ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ನವದೆಹಲಿ (ಅ.04) ಕಾಂತಾರಾ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಮೊದಲೆರಡು ದಿನದಲ್ಲಿ 130 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಎರಡೇ ದಿನದಲ್ಲಿ ಗಳಿಕೆಯಲ್ಲೂ ದಾಖಲೆ ಬರೆದ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶಾದ್ಯಂತ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಗಣ್ಯರು ರಿಷಬ್ ಶೆಟ್ಟಿ ನಿರ್ದೇಶನ, ನಟನೆಯನ್ನು ಕೊಂಡಾಡಿದ್ದಾರೆ. ಇತ್ತ ಅಭಿಮಾನಿಗಳು ರಿಷಬ್ ಶೆಟ್ಟಿ ಸೇರಿದಂತೆ ಇಡೀ ಕಾಂತಾರಾ ತಂಡವನ್ನು ಮೆಚ್ಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಾಂತಾರಾ ತಂಡ ನಾಳೆ (ಅ.05) ಸಕ್ಸಸ್ ಮೀಟ್ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ.
ಕಾಂತಾರಾ ಚಾಪ್ಟರ್ 1 ಸಕ್ಸಸ್ ಮೀಟ್ ಎಲ್ಲಿ ಆಯೋಜನೆ?
ಕಾಂತಾರಾ ಚಾಪ್ಟರ್ 1 ಭರ್ಜರಿ ಯಶಸ್ಸು ಕಂಡಿರುವ ಹಿನ್ನಲೆಯಲ್ಲಿ ಹೊಂಬಾಳೆ ಫಿಲ್ಮಂ ಹಾಗೂ ರಿಷಬ್ ಶೆಟ್ಟಿ ಸಕ್ಸಸ್ ಮೀಟ್ ಆಯೋಜಿಸಿದ್ದಾರೆ. ಮೊದಲ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಭೇಟಿಯಾಗು ಅವಕಾಶ ನೀಡಲಾಗಿದೆ. ರಿಷಬ್ ಶೆಟ್ಟಿ ಅಭಿಮಾನಿಗಳ ಜೊತೆ, ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ.
ರಿಷಬ್ ಶೆಟ್ಟಿ ಫಿದಾ ಆದ ಫ್ಯಾನ್ಸ್
ರಿಷಬ್ ಶೆಟ್ಟಿ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಅಭಿಮಾನಿಗಳು ಕಳೆದೆರಡು ವರ್ಷದಿಂದ ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ನಿರೀಕ್ಷೆಗೂ ಮೀರಿ ಕಾಂತಾರಾ ಚಾಪ್ಟರ್ 1 ಸಿನಿಮಾ ತೆರೆಮೇಲೆ ಅಬ್ಬರಿಸುತ್ತಿದೆ. 2022ರಲ್ಲಿ ಕಾಂತಾರಾ ಸಿನಿಮಾ ಬಿಡುಗಡೆಯಾಗಿ ಹೊಸ ದಾಖಲೆ ಬರೆದಿತ್ತು. 16ರಿಂದ 17 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರಾ ಚಾಪ್ಚರ್ 1 ಸಿನಿಮಾ ಭಾರಿ ಬಜೆಟ್ ಸಿನಿಮಾ. ಸಿನಿಮಾ ನಿರ್ಮಾಣಕ್ಕೆ 125 ಕೋಟಿ ರೂಪಾಯಿಗೂ ಅದಿಕ ಹಣ ವ್ಯಯಿಯಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ತಕ್ಕಂತೆ ಪ್ರೇಕ್ಷಕರಿಗೆ ಅದ್ಭುತ ಸಿನಿಮಾವನ್ನು ಚಿತ್ರತಂಡ ನೀಡಿದೆ.
ಕದಂಬರ ಕಾಲದ ಕತೆ, ತುಳುನಾಡಿನ ಭೂತಾರಾಧನೆ, ಪ್ರಕೃತಿ, ನಂಬಿಕೆ, ಧರ್ಮ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾ ಅದ್ಭುತ ದೃಶ್ಯಕಾವ್ಯವನ್ನು ಸೃಷ್ಟಿಸಲಾಗಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಇನ್ನು ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಪ್ರಮುಖ ತಾರಾಗಣವೂ ಈ ಸಿನಿಮಾವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.
ಕಾಂತಾರಾದಲ್ಲಿ ಕ್ಲೈಮ್ಯಾಕ್ಸ್ ಎಲ್ಲರನ್ನು ಮಂತ್ರಮುಗ್ದರನ್ನಾಗಿ ಮಾಡಿತ್ತು. ಇದೀಗ ಕಾಂತಾರಾ ಚಾಪ್ಟರ್ 1ರಲ್ಲೂ ಇದೇ ರೀತಿಯ ಸಂದರ್ಭ ಹಾಗೂ ಮೈ ರೋಮಾಂಚನಗೊಳ್ಳುವ ಸಂದರ್ಭಗಳೂ ಇವೆ. ಹೀಗಾಗಿ ಕಾಂತಾರಾ ಚಾಪ್ಟರ್ 1 ಸಿನಿಮಾ ವರ್ಷದ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಂಡಿದೆ.
