ಸ್ಯಾಂಡಲ್‌ವುಡ್‌ ನಟ ಅಜಯ್ ರಾವ್ ಮತ್ತು ಸ್ವಪ್ನ ರಾವ್ ವಿಚ್ಛೇದನದ ಅಂಚಿನಲ್ಲಿದ್ದಾರೆ. 11 ವರ್ಷಗಳ ದಾಂಪತ್ಯ ಜೀವನದ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಜ್ಯೋತಿಷಿ ಭವಿಷ್ಯ ನುಡಿದಂತೆ ವಿಚ್ಛೇದನದ ಹಾದಿ ಹಿಡಿದಿದ್ದಾರೆ.

ಬೆಂಗಳೂರು (ಆ.16): ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಜೋಡಿಯ ವಿಚ್ಛೇದನಹ ಹೆಚ್ಚೂ ಕಡಿಮೆ ಖಚಿತವಾಗಿದೆ. ಇತ್ತೀಚೆಗೆ ಕೊನೆಯ ಬಾರಿ ಯುದ್ಧಕಾಂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಜಯ್‌ ರಾವ್‌ ಹಾಗೂ ಅವರ ಪತ್ನಿ ಸ್ವಪ್ನ ರಾವ್‌ ಬೇರೆ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಯುದ್ಧಕಾಂಡ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದ ಅಜಯ್‌ ರಾವ್‌ ಅದರೊಂದ ಯಶಸ್ಸು ಕಂಡುಕೊಂಡಿರಲಿಲ್ಲ. ಆ ವೇಳೆ ನೀಡಿದ ಸಂದರ್ಶನದ ವೇಳೆ ತಮ್ಮ ಸಂಸಾರದ ಬಗ್ಗೆಯೂ ಮಾತನಾಡಿದ್ದರು. ತಮ್ಮ ಯಶಸ್ವಿ ಹಾಗೂ ವೈಫಲ್ಯದ ಪ್ರಯಾಣದ ಕುರಿತು ಅವರು ಮಾತನಾಡಿದ್ದರು. ಮುಹೂರ್ತದ ನಂಬಿಕೆಗಳ ಬಗ್ಗೆ ಅವರ ದೃಷ್ಟಿಕೋನದ ಬಗ್ಗೆಯೂ ತಿಳಿಸಿದ್ದರು. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನುಭವಿಸಿದ ಏರಿಳಿತಗಳನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಅಜಯ್ ರಾವ್ ಮಾತನಾಡಿದ್ದರು.

'ನಾನು ಮದುವೆ ಆಗಿದ್ದೇ ತಪ್ಪಾದ ಮಹೂರ್ತದಲ್ಲಿ. ನನ್ನ ಪ್ರೊಡಕ್ಷನ್‌ ಮೂಲಕ ಬಂದ ಕೃಷ್ಣ ಲೀಲಾ ಸಿನಿಮಾ ಮಾಡಿದ್ದು ಕೂಡ ತಪ್ಪಾದ ಮಹೂರ್ತದಲ್ಲಿ ಎಂದು ಹೇಳಿದ್ದಾರೆ. ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು. ಕೆಟ್ಟ ಮಹೂರ್ತದಲ್ಲಿ ವಿವಾಹ ಆಗಿದ್ದೀಯಾ, ಆದರೆ ಮದುವೆ ಒಂದು ವರ್ಷ ಕೂಡ ಬರೋದಿಲ್ಲ. ಡಿವೋರ್ಸ್‌ ಆಗುತ್ತದೆ' ಎಂದು ಅಜಯ್‌ ರಾವ್‌ಗೆ ಜ್ಯೋತಿಷಿಯೊಬ್ಬರು ಹಿಂದೆ ಹೇಳಿದ್ದರು ಎಂದು ಅಜಯ್‌ ರಾವ್‌ ಸಂದರ್ಶನದಲ್ಲಿ ತಿಳಿಸಿದ್ದರು.

2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅಜಯ್‌ ರಾವ್‌ ಹಾಗೂ ಸ್ವಪ್ನ ರಾವ್‌, ಅಂದಾಜು 11 ವರ್ಷಗಳ ಕಾಲ ಜೊತೆಯಲ್ಲಿದ್ದರು. ಜ್ಯೋತಿಷಿ ಹೇಳಿದಂತೆ ಒಂದೇ ವರ್ಷಕ್ಕೆ ವಿಚ್ಛೇದನ ಆಗದೇ ಇದ್ದರೂ, ಆತ ಹೇಳಿದಂತೆ ವಿಚ್ಛೇದನವಂತೂ ಆಗುತ್ತಿದೆ.

'ನಾನು ಯಾವ ಮುಹೂರ್ತವನ್ನೂ ನೋಡೋದಿಲ್ಲ. ನನಗೆ ಆಸ್ಟ್ರಾಲಜಿ ಬರುತ್ತದೆ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. ಕೃಷ್ಣಾರ್ಪಣಮಸ್ತು ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದಾನೆ’ ಎಂದು ಅಜಯ್‌ ರಾವ್‌ ಹೇಳಿದ್ದರು.

ಕೆಲ ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ 2014ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 11 ವರ್ಷಗಳ ಕಾಲ ನಡೆಸಿದ್ದ ಸಂಸಾರವೀಗ ಬೇರೆ ಬೇರೆ ಆಗುತ್ತಿದೆ. ಈ ದಂಪತಿಗೆ ಚೆರಿಷ್ಮಾ ಹೆಸರಿನ ಹೆಣ್ಣು ಮಗು ಇದೆ.

ಕೆಲ ತಿಂಗಳ ಹಿಂದ ಬಿಡುಗಡೆಯಾಗಿದ್ದ ಯುದ್ಧಕಾಂಡ ಸಿನಿಮಾದ ಮೇಲೆ ಅಜಯ್‌ ರಾವ್‌ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ಧು ಮಾಡಿರಲಿಲ್ಲ. ಈ ಸಿನಿಮಾಕ್ಕೆ ಸಾಕಷ್ಟು ಹಣ ಸುರಿದಿದ್ದಾಗಿ ಅಜಯ್‌ ರಾವ್‌ ಹೇಳಿದ್ದರು. ಅಲ್ಲದೆ, ತಮ್ಮ ಇಷ್ಟದ ಬಿಎಂಡಬ್ಲ್ಯು ಕಾರ್‌ಅನ್ನೇ ಮಾರಾಟ ಮಾಡಿದ್ದ ಸುದ್ದಿ ಭಾರೀ ವೈರಲ್‌ ಆಗಿತ್ತು.

ಬಿಎಂಡಬ್ಲ್ಯು ಕಾರು ಮಾರಾಟ ಮಾಡುವ ವೇಳೆ ಅವರ ಮಗಳು ಕಾರಿನ ಎದುರು ನಿಂತು ಅಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಅಜಯ್‌ ರಾವ್‌ ಈ ವಿಡಿಯೋ ವೈರಲ್‌ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಕಾರು ಮಾರಾಟ ಮಾಡಿದ್ದು ಹೌದು, ಆದರೆ, ಅದು ಈಗಿನ ವಿಡಿಯೋವಲ್ಲ ಎಂದಿದ್ದರು. ಅಲ್ಲದೆ, ನನ್ನ ಅನುಮತಿಯಿಲ್ಲದೆ ಮಗಳ ವಿಡಿಯೋವನ್ನು ವೈರಲ್‌ ಮಾಡಿದ್ದಕ್ಕೆ ಮಾಧ್ಯಮದ ವಿರುದ್ಧ ಸಿಟ್ಟಾಗಿದ್ದರು.