Women Took Their Husband’s Last Names: ಮದುವೆಯಾದ ತಕ್ಷಣ ಹುಡುಗಿ ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ತಾಳೆ. ಇದು ನಮ್ಮ ನಾಡಿನಲ್ಲಿ ಇಲ್ಲದ ಪದ್ಧತಿ ಅಂತೆ. ಹಾಗಾದರೆ ಯಾಕೆ ಹೆಸರು ಸೇರಿಸಿಕೊಳ್ತಾರೆ?

ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ ( Change women Name After Marriage in India ). ಇದು ಹಿಂದು ಧರ್ಮದಲ್ಲಿ ಇಲ್ಲ ಎಂದು ವೇದಮೂರ್ತಿ ಬೋಳಂತಕೋಡಿ ನವನೀತ ಭಟ್ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸೀತಾರಾಮ ಪದ ರಾಮನಿಗೆ.. ಸೀತೆಗಲ್ಲ..!

“ಕೆಲವರು ಗಂಡನ ಹೆಸರನ್ನು ಸೇರಿಸಿಕೊಂಡರೆ, ಇನ್ನೂ ಕೆಲವರು ಸೇರಿಸಿಕೊಳ್ಳೋದಿಲ್ಲ. ಹೆಸರು ಸೇರಿಸೋದು ಶುದ್ಧಾಂಗ ತಪ್ಪು. ಇದು ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ. ಸೀತೆ ಜಾನಕಿ ಅಥವಾ ಮೈಥಿಲಿ ಎಂದು ಕರೆಸಿಕೊಂಡಳೇ ವಿನಾ ಎಂದೂ 'ರಾಮಿ' ಆಗಲಿಲ್ಲ. ಸೀತಾರಾಮ ಎಂಬ ಪದ ಬಳಕೆಯಲ್ಲಿದೆ, ಇದು ರಾಮನಿಗೆ ಅನ್ವಯವಾಗುತ್ತದೆಯೇ ಹೊರತು ಸೀತೆಗಲ್ಲ. ಕೃಷ್ಣೆ- ದ್ರೌಪದಿ ಅಥವಾ ಪಾಂಚಾಲಿ ಎನ್ನಿಸಿಕೊಂಡಳೇ ಹೊರತು ಪಾಂಡವಿ ಆಗಲಿಲ್ಲ. ಪೃಥೆಯು ಕುಂತಿಯಾದಳೇ ವಿನಾ ಪಾಂಡವಿ ಆಗಲಿಲ್ಲ” ಎಂಬುದು ನವನೀತ್‌ ಅಭಿಪ್ರಾಯ.

ಹೆಸರಿನ ಮುಂದೆ ಪತಿ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ!

“ಗಾಂಧಾರಿ ಗಾಂಧಾರಿಯಾಗಿಯೇ ಉಳಿದಳು. ಧೃತರಾಷ್ಟ್ರನ ಹೆಸರನ್ನು ತನ್ನ ಹೆಸರಿನ ಮುಂದೆ ತರಲಿಲ್ಲ. ರುಕ್ಮಿಣಿ ಎಂದೂ ತನ್ನ ಹೆಸರಿನ ಮುಂದೆ ಕೃಷ್ಣನ ಹೆಸರನ್ನು ಸೇರಿಸಿಕೊಳ್ಳಲಿಲ್ಲ. ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ” ಎಂಬುದು ನವನೀತ್‌ ಭಟ್‌ ಅಭಿಪ್ರಾಯ.

ಹೆಸರು ಸೇರಿಸಿಕೊಳ್ಳೋದು ವೈಯಕ್ತಿಕ ವಿಷಯ!

“ಹಿಂದೂ ಧರ್ಮದಲ್ಲಿ ಹೆಂಡತಿಯಾದವಳು ಮದುವೆಯಾದೊಡನೆ ತವರು ಮನೆಯನ್ನು ಬಿಟ್ಟು ಶಾಶ್ವತವಾಗಿ ಗಂಡನ ಮನೆಗೆ ಹೋಗುವುದು ರೂಢಿಯಾಗಿದೆ. ಹೆಣ್ಣು ತಾನು ಹುಟ್ಟಿದ ಮನೆ, ಕುಲಗಳಿಂದ ಹೊರಬಂದು ತನ್ನ ಗಂಡನ ಮನೆ, ಕುಲಗಳನ್ನೇ ತನ್ನದಾಗಿ ಮಾಡಿಕೊಂಡು ಆ ಕುಲ / ವಂಶವನ್ನು ಮುಂದೆ ಬೆಳೆಸಬೇಕೆಂದು ಹೇಳಲಾಗುತ್ತದೆ. (ಕನ್ನಡದ ಜಾನಪದ ಗೀತೆಗಳೂ ಇದನ್ನೇ ಹೇಳುತ್ತವೆ). ಇದೇನೂ ಶೋಷಣೆ ಅಲ್ಲ. ಈ ಹೆಣ್ನು ಮದುವೆಯಾದೊಡನೆ ತನ್ನ ಗಂಡನ ಮನೆಯ ಆಸ್ತಿಯ ಹಕ್ಕು ಪಡೆಯುತ್ತಾಳೆ, ಮುಂದೆ ಆ ಮನೆಯ ಯಜಮಾನಿ ಆಗುತ್ತಾಳೆ” ಎಂದು ಮುಕುಂದ ಕುಡುಕೋಳ ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಮಹಿಳೆ ಹುಟ್ಟಿನಿಂದ ಸುಮಾರು 20-25 ವರ್ಷ ತಂದೆ ಮನೆಯಲ್ಲಿ ಇರುತ್ತಾಳೆ. ಆಮೇಲೆ 50 ವರ್ಷಕ್ಕೂ ಹೆಚ್ಚು ಕಾಲ ಗಂಡನ ಮನೆಯಲ್ಲಿ ಇರುತ್ತಾಳೆ. ತನ್ನ ಜೀವನಾವಧಿಯ ಹೆಚ್ಚಿನ ಭಾಗವನ್ನು ಅವಳು ಹೊಸದಾದ ಕುಟುಂಬದ ಜೊತೆಗೆ ಕಳೆಯುತ್ತಾಳೆ. ಆದ್ದರಿಂದ ಅವಳು ತನ್ನನ್ನು ತಾನು ಹೊಸ ಕುಟುಂಬದೊಂದಿಗೆ ಜೋಡಿಸಿಕೊಳ್ಳುವುದೇ ಸರಿ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಮದುವೆಯ ನಂತರ ಗಂಡನ ಕುಟುಂಬ ಓರ್ವ ಹೊರಗಿನ ವ್ಯಕ್ತಿಯನ್ನು ತಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳುತ್ತದೆ. ಇದು ಆ ಕುಟುಂಬದ ಎಲ್ಲರೂ ಮಾಡಬೇಕಾದ ಹೊಂದಾಣಿಕೆ. ಈ ಕಾರ್ಯದಲ್ಲಿ ಹೆಂಡತಿಯಾದವಳು ಗಂಡನ / ಕುಟುಂಬದ ಹೆಸರನ್ನು ಕೂಡ ಒಪ್ಪಿಕೊಳ್ಳದಿದ್ದಲ್ಲಿ “ನಿವು ನನ್ನನ್ನು ಒಪ್ಪಿಕೊಳ್ಳಿ, ನಾನು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುವದಿಲ್ಲ” ಅಂತ ಅರ್ಥ ಬರೋದಿಲ್ವೆ ಎಂದು ಮುಕುಂದ ಅವರು ಹೇಳಿದ್ದಾರೆ.

ಈ ವಿಚಾರವಾಗಿ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯ ಇರುವುದು. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ ಮೂಲಕ ತಿಳಿಸಿ. ಇದು ಕೇವಲ ಚರ್ಚೆಯಷ್ಟೇ ಹೊರತು, ಜಡ್ಜ್‌ಮೆಂಟ್‌ ಅಲ್ಲ.